ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್, ಯಾವುದೇ ವ್ಯಕ್ತಿಗಳ ಕಿರುಕುಳ ನಿಯಂತ್ರಿಸಲು ಸರ್ಕಾರ ಇರುವ ಕಾಯ್ದೆಗಳನ್ನು ಬಲಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅದರಂತೆ ಸಹಕಾರ ಇಲಾಖೆ ತರಲು ಉದ್ದೇಶಿಸಿರುವ ಕರ್ನಾಟಕ ಅಧಿಕ ಬಡ್ಡಿ ನಿಷೇಧ ಅಧಿನಿಯಮ - 2004ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಹಕಾರ ಸಂಘಗಳು, ನಿಬಂಧಕರು ಈಗಾಗಲೇ ಅಸ್ತಿತ್ವದಲ್ಲಿರುವ ಕರ್ನಾಟಕ ಅಧಿಕ ಬಡ್ಡಿ ನಿಷೇಧ ಕಾಯ್ದೆಯಡಿ ಅಪರಾಧಿಗಳಿಗೆ 10 ವರ್ಷ ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸುವ ಮೂಲಕ ಮತ್ತಷ್ಟು ಬಿಗಿಗೊಳಿಸಲು ತಿದ್ದುಪಡಿ ಪ್ರಸ್ತಾಪಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಅದೇ ರೀತಿ ಕರ್ನಾಟಕ ಗಿರಿವಿದಾರರ ಅಧಿನಿಯಮ 1961ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ 2025ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ. ಇನ್ನು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ತಿದ್ದುಪಡಿ ವಿಧೇಯಕ 2025ಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ಇರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲು ಮುಂದಾಗಿದೆ.
ಕನ್ನಡ ಮಾಧ್ಯಮ ಮತ್ತು ಕನ್ನಡ ಪರೀಕ್ಷೆ ಪಾಸಾದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯವಿಲ್ಲ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲವೊಂದು ಅರ್ಹ ಅಭ್ಯರ್ಥಿಗಳಿಗೆ ಅಂದರೆ ತತ್ಸಮಾನ ಎಸ್.ಎಸ್.ಎಲ್.ಸಿ ಮತ್ತು ಅದರ ತತ್ಸಮಾನ ವಿದ್ಯಾರ್ಥಿಗಳ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸಿರುವ ಮತ್ತು ಸದರಿ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಮಾಡಿರುವ ಮತ್ತು ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇತರ ಆಯ್ಕೆ ಪ್ರಾಧಿಕಾರಗಳು ನಡೆಸಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯಥಿಗಳಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ)(3ನೇ ತಿದ್ದುಪಡಿ) ನಿಯಮಗಳು, 2025ನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978ರ ಕಲಂ 3 ಮತ್ತು 8ರ ಅನುಸಾರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿ, ತರುವಾಯ 15 ದಿನಗಳ ಒಳಗಾಗಿ ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲು; ಹಾಗೂ ಪ್ರಕಟಗೊಂಡ 15 ದಿನಗಳ ಒಳಗಾಗಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದೇ ಇದ್ದಲ್ಲಿ ಅಥವಾ ಸ್ವೀಕೃತವಾದ ಆಕ್ಷೇಪಣೆ/ಸಲಹೆಗಳು ಗುರುತರವಾಗಿರದೇ ಇದ್ದಲ್ಲಿ ಅಥವಾ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಿ (ಸದರಿ ಕರಡು ನಿಯಮಗಳಲ್ಲಿ) ಮಾಡಬಹುದಾದ ಮಾರ್ಪಾಡುಗಳು ಪ್ರಮುಖವಾದಂತಹವುಗಳಾಗದೇ ಇದ್ದಲ್ಲಿ ಪುನಃ ಸಚಿವ ಸಂಪುಟದ ಅನುಮೋದನೆಗಾಗಿ ಮಂಡಿಸದೇ ಸದರಿ ಕರಡು ನಿಯಮಗಳನ್ನು ಅಂತಿಮವಾಗಿ ಹೊರಡಿಸಲು ಸಚಿವ ಸಂಪುಟ ಅನುಮೋದಿಸಿದೆ.
ಬೆಂಗಳೂರು ನೀರು ಸರಬರಾಜು ಆಧುನೀಕರಣ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಿ.ಎಲ್.ಆರ್. ಜಾನ್ಸನ್ ಮಾರ್ಕೆಟ್, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾ ಠಾಣೆಗಳ ಪ್ರದೇಶವಾರು ನೀರು ಸರಬರಾಜು ವ್ಯವಸ್ಥೆಗಳ ಆಧುನೀಕರಣ ಮತ್ತು ಮರು ರೂಪಿಸುವ ಯೋಜನೆಯನ್ನು ಕೈಗೊಳ್ಳಲು ಒಟ್ಟು ರೂ.199 ಕೋಟಿಗಳ ಅಂದಾಜು ವೆಚ್ಚದ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ನೀರಿನ ಸೋರಿಕೆ ಪ್ರಮಾಣವನ್ನು ಶೇ.33 ರಿಂದ ಶೇ.10ಕ್ಕೆ ಕಡಿತಗೊಳಿಸಬಹುದು. ಜಾನ್ಸನ್ ಮಾರ್ಕೆಟ್, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾ ಠಾಣೆಗಳ ಉಪವಿಭಾಗಗಳ ನೀರಿನ ಸೋರಿಕೆ ಹೆಚ್ಚಾಗಿದ್ದು, ನೀರು ಕಲುಷಿತವಾಗಿರುವ ದೂರುಗಳಿವೆ. ಆದ್ದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರದೇಶವಾರು ನೀರು ಸರಬರಾಜು ವ್ಯವಸ್ಥೆಗಳ ಆಧುನೀಕರಣ ಮತ್ತು ಮರು ರೂಪಿಸುವ ಒಟ್ಟು ರೂ.199 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅನ್ನಭಾಗ್ಯ ನಗದು ಬದಲು ಅಕ್ಕಿ: ಕೇಂದ್ರ ಸರ್ಕಾರ ಜನವರಿ-2025 ರಿಂದ ಜೂನ್-2025ರವರೆಗೆ ಪ್ರತಿ ಕೆಜಿಗೆ 22.50 ರೂ ದರದಲ್ಲಿ ಅಕ್ಕಿ ಸರಬರಾಜು ಮಾಡಲು ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥೆ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿಯಿಂದ ಜಾರಿಗೆ ಬರುವಂತೆ 5 ಕೆ.ಜಿ. ಅಕ್ಕಿಯನ್ನು ವಿತರಿಸುವ ಆದೇಶಕ್ಕೆ ಘಟೋನೋತ್ತರ ಅನುಮೋದನೆ.
ಮರು ಟೆಂಡರ್ಗೆ ತೀರ್ಮಾನ: ಈಜೀಪುರ ಮೇಲ್ಸೇತುವೆ ಕಾಮಗಾರಿಯಲ್ಲಿ ಆಗಿರುವ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲವನ್ನು ಸಾಧ್ಯವಾದಷ್ಟು ಬೇಗನೆ ತಪ್ಪಿಸಿ, “Construction of Elevated Rotary Flyover at IOC Junction and Construction of additional 2 Lane ROB at Baiyyappanahalli Railway Level Crossing on Turnkey Lumpsum Fixed Price -No Variation No Escalation basis" ಯೋಜನೆಯ ಬೃಹತ್ ಕಾಮಗಾರಿಗಳನ್ನು ಕಾಲಮಿತಿಯೊಳಗೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲಭ್ಯಗೊಳಿಸಲು ಅನುವಾಗುವಂತೆ ಚಾಲ್ತಿ ದರಕ್ಕೆ ಶೇ.21 ರಷ್ಟು ಹೆಚ್ಚಿನ ಲಾಭಾಂಶವುಳ್ಳ ಸಂಧಾನಿತ ಟೆಂಡರ್ ಪ್ರಸ್ತಾವನೆಯಾದ (Smt. Kusuma (Star Infratech formerly Known as State Builders and Developers) ರವರ ಬಿಡ್ಡನ್ನು ಸಚಿವ ಸಂಪುಟ ಒಪ್ಪದೆ ಮರು ಟೆಂಡರ್ ಕರೆಯಲು ತೀರ್ಮಾನಿಸಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಐಓಸಿ ಜಂಕ್ಷನ್‍ನಲ್ಲಿ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಹಾಗೂ ಐಟಿಸಿ ಫ್ಯಾಕ್ಟರಿ ಜಂಕ್ಷನ್‍ನಿಂದ ಬೈಯಪ್ಪನಹಳ್ಳಿ ಜಂಕ್ಷನ್‍ವರೆಗೆ ಹೆಚ್ಚುವರಿ ಎರಡು ಪಥದ ಆರ್ಓಬಿಯನ್ನು (ಸಂಯೋಜಿತ ಫ್ಲೈಓವರ್ ನೊಂದಿಗೆ) ನಿರ್ಮಾಣ ಮಾಡಲು ಟೆಂಡರ್ ಸಂಧಾನಿತ ಮೊತ್ತ ರೂ.426.50 ಕೋಟಿಗಳಿಗೆ ಅನುಮೋದನೆಗೆ ತೀರ್ಮಾನಿಸಲಾಗಿದೆ.
ಎಪಿಎಮ್ಸಿ ಕಾಯ್ದೆ ತಿದ್ದುಪಡಿ: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ & ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ಹಾಗೂ ಇದನ್ನು ವಿಧಾನಮಂಡಲದಲ್ಲಿ ಮಂಡಿಸಲು ಅನುಮೋದಿಸಿದೆ. ಮಾರಾಟ ಚಟುವಟಿಕೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾರುಕಟ್ಟೆ ಸಮಿತಿಗಳ ಜವಾಬ್ದಾರಿಯಾಗಿರುತ್ತದೆ. ಪ್ರಸ್ತುತ ಮಾರುಕಟ್ಟೆ ತಿದ್ದುಪಡಿಯು ಮಾರುಕಟ್ಟೆ ಸಮಿತಿಯ ಅಧಿಕಾರದ ವ್ಯಾಪ್ತಿಯನ್ನು ಮಾರುಕಟ್ಟೆ ಕ್ಷೇತ್ರಕ್ಕೆ ವಿಸ್ತರಿಸಿರುವುದರಿಂದ ನ್ಯಾಯಾಲಯದ ನಿರ್ದೇಶನ ಮೇರೆಗೆ ಚಿಲ್ಲರೆ ವಹಿವಾಟಿಗೆ ಸಂಬಂಧಿಸಿದಂತೆ ವರ್ಗೀಕರಣ ಮಾಡುವ ಪ್ರಸ್ತಾವವನ್ನು ಅಂಗೀಕಾರ ಪಡೆಯುವುದು ಅಗತ್ಯವಿದೆ ಎಂದು ಪ್ರಸ್ತಾಪಿಸಲಾಗಿದೆ.
ಇತರ ಪ್ರಮುಖ ತೀರ್ಮಾನಗಳೇನು?:
- ಬಿಯಾಂಡ್ ಬೆಂಗಳೂರು ಕ್ಲಸ್ಟರ್ಸ್ ಸೀಡ್ ಫಂಡ್‍ಗಳನ್ನು (ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ) ವಿಲೀನಗೊಳಿಸಲು ಮತ್ತು 75 ಕೋಟಿಗ ರೂ ಅಂದಾಜು ವೆಚ್ಚದಲ್ಲಿ ನವೋದ್ಯಮಗಳಿಗಾಗಿ ಒಂದು ಸಂಯೋಜಿತ ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಅನ್ನು ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ. 2030ರ ವೇಳೆಗೆ ಕನಿಷ್ಟ 10 ಸಾವಿರ ನವೋದ್ಯಮಗಳನ್ನು ಹೊಂದುವುದು ಉದ್ದೇಶವಾಗಿದೆ.
- ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಮುರಗಮಲ್ಲ ಗ್ರಾಮದಲ್ಲಿರುವ ದರ್ಗಾ ಹಜರತ್ ಫಖೀ-ಷಾ-ವಲಿದರ್ಗಾ (ಅಮ್ಮಜಾನ್-ಬಾವ್‍ಜಾನ್ ದರ್ಗಾ)ದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ 31.99 ಕೋಟಿ ರೂ ಅಂದಾಜು ಮೊತ್ತದಲ್ಲಿ ಕಾಮಗಾರಿಗಳನ್ನು ಮುಂದಿನ 3 ವರ್ಷಗಳಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಇದನ್ನೂ ಓದಿ: ಮೂರು ಬಾರಿ ಮುಂದೂಡಿದ್ದ ಮಲೆ ಮಹದೇಶ್ವರ ಬೆಟ್ಟದಲ್ಲಿನ ಸಂಪುಟ ಸಭೆಗೆ ಮತ್ತೆ ದಿನ ನಿಗದಿ
- ಹುಬ್ಬಳ್ಳಿ ತಾಲೂಕು ಸಿಟಿಎಸ್ ನಂ.4553/ಬಿ ನೇದ್ದರಲ್ಲಿಯ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಒಡೆತನದ ವಿಸ್ತೀರ್ಣ 2988.29 ಚ.ಮೀ ಜಾಗವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಧಾರವಾಡ ಇವರಿಗೆ ಜಿಲ್ಲಾ ಕಾರ್ಯಾಲಯ ನಿರ್ಮಿಸಲು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪ್ರಸ್ತುತ ಮಾರ್ಗಸೂಚಿ ದರದ ಶೇಕಡಾ.5 ರಷ್ಟು ದರ ವಿಧಿಸಿ ಮಂಜೂರು ಮಾಡಲು ಸಚಿವ ಸಂಪುಟ ನಿರ್ಧಾರ.
- ಐಐಐಟಿ-ಬೆಂಗಳೂರು ಸಂಸ್ಥೆಯ ಮೂಲಸೌಕರ್ಯ ವಿಸ್ತರಣಾ ಯೋಜನೆಗೆ ಕರ್ನಾಟಕ ಸರ್ಕಾರ ಒಟ್ಟು ಯೋಜನಾ ವೆಚ್ಚ 817 ಕೋಟಿ ರೂ ಪೈಕಿ 285.95 ಕೋಟಿಗಳ (ಶೇ.35ರಷ್ಟು) ಕೊಡುಗೆ ನೀಡಲು ಅನುಮೋದನೆ ಮತ್ತು ಈ ಹಂತ ಹಂತದ ಕೊಡುಗೆಯ ಭಾಗವಾಗಿ, 2024-25ನೇ ಆಯವ್ಯಯ ಸಾಲಿನಲ್ಲಿ ಈಗಾಗಲೇ ಲಭ್ಯವಿರುವ 25 ಕೋಟಿ ರೂ ಆರಂಭಿಕ ಹಂಚಿಕೆಯನ್ನು ವಿತರಿಸಿ, ಉಳಿದ ಕೊಡುಗೆಗಳನ್ನು ಮುಂದಿನ ಏಳು ವರ್ಷಗಳಲ್ಲಿ ವಾರ್ಷಿಕ ಆಯವ್ಯಯ ಅನುಮೋದನೆಗಳಿಗೆ ಒಳಪಟ್ಟು ವಿತರಣೆಗೆ ತೀರ್ಮಾನ.
- ‘ಸೆಮಿಕಂಡಕ್ಟರ್ ಫ್ಯೂಚರ್ ಆಕ್ಸಿಲರೇಟರ್ ಲ್ಯಾಬ್ 2.0 ಅನ್ನು 79.805 ಕೋಟಿಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು, ಕರ್ನಾಟಕ ಸರ್ಕಾರ 5 ವರ್ಷಗಳ ಅವಧಿಯಲ್ಲಿ (2025-2030) 50.33 ಕೊಟಿಗಳ ಕೊಡುಗೆಯನ್ನು ನೀಡಲು; ಹಾಗೂ ಯೋಜನೆಯ ಉದ್ದೇಶಗಳನ್ನು ಪೂರೈಸಲು “ಸೆಮಿಕಂಡಕ್ಟರ್ ಪ್ಯೂಚರ್ ಆಕ್ಸಿಲರೇಟರ್ ಲ್ಯಾಬ್ 2.0” ಅನ್ನ ಸೆಕ್ಷನ್ 8 ಕಂಪನಿಯಾಗಿ ಸ್ಥಾಪಿಸಲು ಅನುಮೋದನೆಗೆ ಸಚಿವ ಸಂಪುಟ ನಿರ್ಧಾರ.
- ವಸತಿ ರಹಿತ ಮೀನುಗಾರರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ಮೀನುಗಾರಿಕೆ ಕಲ್ಯಾಣ ಯೋಜನೆಯಡಿ ಮೀನುಗಾರರ ಮಾದರಿ ಗ್ರಾಮಗಳ ಅಬಿವೃದ್ಧಿಗಾಗಿ “ಮತ್ಸ್ಯಾಶ್ರಯ ಯೋಜನೆ” 10,000 ಮನೆಗಳನ್ನು ಮಂಜೂರು ಮಾಡಲು ಅನುಮೋದನೆ.
- “ಕೇಂದ್ರ ಪುರಸ್ಕೃತ “ಪ್ರಸಾದ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಬೀದರ್ ಜಿಲ್ಲೆಯ ಬೀದರ್ ಶ್ರೀ ಪಾಪನಾಶ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳನ್ನು (ಶೇ 100% ರಷ್ಟು ಕೇಂದ್ರ ಸಹಾಯಧನ) ಅಭಿವೃದ್ಧಿ ಪಡಿಸುವ ಯೋಜನೆಯನ್ನು 22.41 ಕೋಟಿ ಅಂದಾಜು ಮೊತ್ತದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯ.
- ಕೇಂದ್ರ ಪುರಸ್ಕೃತ “ಪ್ರಸಾದ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು (ಶೇ 100% ರಷ್ಟು ಕೇಂದ್ರ ಸಹಾಯಧನ) ಅಭಿವೃದ್ಧಿ ಪಡಿಸಲು 18.37 ಕೋಟಿಗಳ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. ಒಟ್ಟು ಯೋಜನಾ ವೆಚ್ಚ 18.37 ಕೋಟಿಗಳು. ಬಹುಪಯೋಗಿ ಕಟ್ಟಡ, ಪುರುಷರ/ಮಹಿಳೆಯರ ಶೌಚಾಲಯ, ಕಂಪೌಂಡ್ ಗೋಡೆ, ಭಕ್ತಾದಿಗಳ ವಿಶ್ರಾಂತಿ ಕೊಠಡಿ, ಪ್ರವಾಸಿಗರಿ/ಭಕ್ತಾದಿಗಳಿಗೆ ಮಾಹಿತಿ ಕೇಂದ್ರ, ಪ್ರಥಮ ಚಿಕಿತ್ಸಾ ಕೊಠಡಿ, ಸೋಲಾರ ಪ್ಯಾನಲ್, ಎಸ್‍ಟಿಪಿ, ಸ್ಮಾರ್ಟ್ ಡಿಸ್ಪ್ಲೈ ಮಾಹಿತಿ ಫಲಕಗಳು, ಲ್ಯಾಂಡ್ ಸ್ಕೇಪಿಂಗ್ ಮತ್ತು ಪಾಥವೇ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು.
- ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ “ಪ್ರಸಾದ್” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು 61.99 ಕೋಟಿಗಳ (ಕೇಂದ್ರದ ಪಾಲು 45.71 ಕೋಟಿಗಳು ಹಾಗೂ ರಾಜ್ಯದ ಪಾಲು 16.28 ಕೋಟಿಗಳು) ಪರಿಷ್ಕೃತ ಅಂದಾಜು ಮೊತ್ತದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಅನುಮೋದನೆ.
- ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣವನ್ನು 20 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗಳಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ