ಅಯೋಧ್ಯಾ (ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಮಂದಿರಕ್ಕೆ ದೇಶಾದ್ಯಂತದಿಂದ ಭಕ್ತರ ದಂಡೇ ಹರಿದು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದರಿಂದ ನೂಕುನುಗ್ಗಲಿಗೂ ಸಾಕ್ಷಿಯಾಗಿದೆ.
ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5 ಗಂಟೆಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ಇದು ರಾತ್ರಿಯಾದರೂ ಕಡಿಮೆ ಆಗಿರಲಿಲ್ಲ. ರಾತ್ರಿ 10 ಗಂಟೆಯವರೆಗೂ ನಿರಂತರ ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದರು. ತಡರಾತ್ರಿವರೆಗೂ ಕಾದ ಭಕ್ತರು ದರ್ಶನ ಪಡೆದು ಧನ್ಯತಾ ಭಾವ ಮೆರೆದರು.
ಪ್ರಯಾಗರಾಜ್‌ನ ಮಹಾಕುಂಭದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ, ಅನೇಕ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಅಯೋಧ್ಯಾಗೆ ಭೇಟಿ ನೀಡಿ ರಾಮನ ದರ್ಶನ ಮಾಡಲು ಮುಂದಾಗುತ್ತಿದ್ದಾರೆ. ಇದರ ಪರಿಣಾಮವಾಗಿ ದೇವಾಲಯದ ಆವರಣದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಿದ್ದಾರೆ.
ಸೂಕ್ತ ಸುರಕ್ಷತಾ ವ್ಯವಸ್ಥೆ ಮಾಡಿದ ಸ್ಥಳೀಯ ಆಡಳಿತ: ಹೆಚ್ಚುತ್ತಿರುವ ಭಕ್ತರ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಸುರಕ್ಷತೆಯ ಕ್ರಮ ಕೈಗೊಂಡಿದೆ. ವ್ಯಾಪಕವಾದ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಅಯೋಧ್ಯಾದ ಎಸ್‌ಎಸ್‌ಪಿ ರಾಜ್‌ಕರನ್ ನಯ್ಯರ್ ಮಾಹಿತಿ ನೀಡಿದ್ದಾರೆ. ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ನಿರಂತರವಾಗಿ ಬರುತ್ತಿದ್ದಾರೆ. ಜನಸಂದಣಿ ನಿಯಂತ್ರಣ, ಭದ್ರತೆ ಮತ್ತು ಸಂಚಾರ ನಿರ್ವಹಣೆಗಾಗಿ 24 ಗಂಟೆಗಳ ನಿಗಾ ವಹಿಸಲಾಗಿದೆ. ಪ್ರತಿಯೊಬ್ಬರ ಉದ್ದೇಶವೂ ಒಂದೇ ಆಗಿದೆ, ರಾಮ ಲಲ್ಲಾನನ್ನು ನೋಡಿ ಆತನ ಅನುಗ್ರಹ ಪಡೆದುಕೊಳ್ಳವುದಾಗಿದೆ ಎಂದು ಅವರು ಹೇಳಿದ್ದಾರೆ. ಸುಗಮ ದರ್ಶನಕ್ಕಾಗಿ ಆಗಮಿಸುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಸುಗಮ ಸಂಚಾರಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಯ್ಯರ್ ತಿಳಸಿದರು. ರಾಮ್ ಲಲ್ಲಾನ ದರ್ಶನಕ್ಕಾಗಿ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಅವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಪೊಲೀಸರು ನಗರವನ್ನು ಆರು ವಿಭಾಗಗಳು ಮತ್ತು 11 ವಲಯಗಳಾಗಿ ವಿಂಗಡಿಸಿದ್ದಾರೆ.
ಮಹಾ ಕುಂಭಮೇಳ ಪ್ರಾರಂಭವಾದಾಗಿನಿಂದ ಕುಂಭಮೇಳದಲ್ಲಿ ಸ್ನಾನ ಮಾಡಲು ಹೊರಟಿರುವ ಜನರು ಅಯೋಧ್ಯಾ ಧಾಮದಲ್ಲಿ ಶ್ರೀರಾಮ ಮತ್ತು ಹನುಮಾನ್ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಸರಯೂ ನದಿಯ ದರ್ಶನ ಪಡೆಯಲು ಮತ್ತು ಸರಯೂ ನದಿಯಲ್ಲಿ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಇಷ್ಟ ಪಡುತ್ತಿದ್ದಾರೆ ಎಂದು ಅಯೋಧ್ಯಾ ಎಸ್ಪಿ ಮಧುವನ್ ಕುಮಾರ್ ಸಿಂಗ್ ಹೇಳಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ 2016-17ರಲ್ಲಿ 2.35 ಲಕ್ಷದಿಂದ 2024 ರಲ್ಲಿ 14-15 ಕೋಟಿಗೆ ಏರಿಕೆಯಾಗಿದೆ. ಇದು ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ: ಭಕ್ತರನ್ನ ವಂಚನೆಯಿಂದ ತಡೆಯಲು ಹಿತ ರಾಧಾ ಕೆಲ್ಲಿ ಕುಂಜ್ ಟ್ರಸ್ಟ್ನ 7 ಅಂಶಗಳ ಸಲಹೆ!: ಏನದು ಎಚ್ಚರಿಕೆ?