ಬೆಂಗಳೂರು: ರಕ್ಷಣಾ ಸಚಿವರ ಬೆಂಗಾವಲು ವಾಹನ ತೆರಳುವಾಗ ಇತರೆ ವಾಹನಗಳನ್ನು ನಿಯಂತ್ರಿಸುತ್ತಿದ್ದ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ನತ್ತ ಸ್ಕೂಟರ್ ಚಲಾಯಿಸಿ ಗಾಯಗೊಳಿಸಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸೋಂ ಮೂಲದ ಅಹಮದ್ ದಿಲಾವರ್ ಹುಸೇನ್ (22) ಬಂಧಿತ ಆರೋಪಿ. ಫೆಬ್ರವರಿ 9ರಂದು ಸೆಂಟ್ರಲ್ ಸ್ಟ್ರೀಟ್‌ನ ಬಿಆರ್‌ವಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ಸರ್ಕಲ್ ನಡುವಿನ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾಜಿನಗರ ಸಂಚಾರ ಠಾಣೆಯ ಹೆಡ್ ಕಾನ್ಸ್ಟೇಬಲ್ ದಿನೇಶ್ ಅವರತ್ತ ಆರೋಪಿ ತನ್ನ ಸ್ಕೂಟರ್ ನುಗ್ಗಿಸಿದ್ದ.
ಫೆಬ್ರವರಿ 9ರಂದು ರಾಜಧಾನಿ ಬೆಂಗಳೂರಿನಲ್ಲಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಾಹನ ಮಧ್ಯಾಹ್ನ 1:50ರ ಸುಮಾರಿಗೆ ಸೆಂಟ್ರಲ್ ಸ್ಟ್ರೀಟ್‌ನಲ್ಲಿ ತೆರಳುತ್ತಿತ್ತು. ಈ ವೇಳೆ ಸಚಿವರ ಬೆಂಗಾವಲು ವಾಹನಕ್ಕೆ ದಾರಿಮಾಡಿಕೊಡಲು ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಬಿಆರ್‌ವಿ ಜಂಕ್ಷನ್‌ನತ್ತ ಬರುವ ವಾಹನಗಳನ್ನು ಹೆಡ್ ಕಾನ್ಸ್ಟೇಬಲ್ ದಿನೇಶ್ ನಿಯಂತ್ರಿಸುತ್ತಿದ್ದರು. ಆಗ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಆರೋಪಿ, ಸೂಚನೆಯನ್ನು ಮೀರಿ ದಿನೇಶ್ ಅವರತ್ತ ನುಗ್ಗಿದ್ದ. ಇದರಿಂದ ನೆಲಕ್ಕೆ ಬಿದ್ದಿದ್ದ ದಿನೇಶ್ ಅವರ ತಲೆ, ಬಲ ಕಿವಿ, ಕೈಕಾಲಿಗೆ ಗಾಯಗಳಾಗಿದ್ದವು. ಗಾಯಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ದಿನೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು.
ಆರು ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಿದ್ದ ಆರೋಪಿ, ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿರುವ ಮಾಲ್‌ವೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ. ಘಟನೆಯ ದಿನ ಸ್ನೇಹಿತನನ್ನು ಶಿವಾಜಿನಗರಕ್ಕೆ ಡ್ರಾಪ್ ಮಾಡಲು ತೆರಳುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್.ಟಿ ಮಾಹಿತಿ ನೀಡಿದರು.
ಇದನ್ನೂ ಓದಿ: 10 ವರ್ಷದ ಹಿಂದಿನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಹಚ್ಚಿದ ಎಐ ಪವರ್ಡ್ ಕ್ಯಾಮೆರಾ!
ಇದನ್ನೂ ಓದಿ: ಡ್ರಗ್ಸ್ ಚಟಕ್ಕೆ ಒಳಗಾಗಿದ್ದ ಪುತ್ರನಿಗೆ ಬೈದು ಬುದ್ಧಿ ಹೇಳಿದ್ದಕ್ಕೆ ತಂದೆ ಎದೆಗೆ ಇರಿದು ಕೊಂದ!