ಬೆಂಗಳೂರು: ಈ ಬಾರಿ ವಾಡಿಕೆ ಪ್ರಮಾಣದ ಹಿಂಗಾರು, ಮುಂಗಾರು ಮಳೆ ಹಾಗೂ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯು ಚಂಡಮಾರುತದಿಂದಾಗಿ ರಾಜ್ಯದ ಒಳನಾಡಿನಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಿದೆ. ಮುಖ್ಯವಾಗಿ ಉತ್ತರ ಒಳನಾಡಿನ ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ತೀವ್ರ ಶೀತ ಗಾಳಿ ಬೀಸಲಿದ್ದು, ಮುನ್ನೆಚ್ಚರಿಕೆ ನೀಡಲಾಗಿದೆ.
ರೆಡ್ ಅಲರ್ಟ್: ತೀವ್ರ ಶೀತ ಗಾಳಿಯ ಸಾಧ್ಯತೆ ಹಿನ್ನೆಲೆ ಇಂದಿನಿಂದ ಮೂರು ದಿನ ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಅದೇ ಭಾಗದ ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಶೀತ ಅಲೆಯ ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.
ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಯಲ್ಲಿ 6 ರಿಂದ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಇದು ಸಾಮಾನ್ಯಕ್ಕಿಂತ 6 ರಿಂದ 7 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಇನ್ನು ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಹ ಶೀತ ಅಲೆಯ ಇರಲಿದ್ದು, ಅಲ್ಲಿ ತಾಪಮಾನ ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಕಡಿಮೆ ತಾಪಮಾನವಾಗಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ದಟ್ಟ ಮಂಜು ಕಂಡುಬರಲಿದೆ. ಇನ್ನು ಈ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಡೆ ಮೂರು ದಿನಗಳ ಕಾಲ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಹವಾಮಾನ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ನಿರ್ಮಲ ಆಕಾಶ ಕಾಣಸಿಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಡಿಗ್ರಿ ಮತ್ತು 15 ಡಿಗ್ರಿ ದಾಖಲಾಗುವ ಸಂಭವವಿದೆ ಎಂದು ಮಾಹಿತಿ ನೀಡಿದೆ.
"ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ವಾಯು ಚಂಡಮಾರುತದ ಪರಿಚಲನೆಯು ಇದ್ದು, ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೆ ವಿಸ್ತರಿಸಿದೆ. ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ - ವಾಯುವ್ಯ ಮಾರ್ಗವಾಗಿ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ. ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶದ ಮೇಲಿನ ವಾಯು ಚಂಡಮಾರುತದ ಪರಿಚಲನೆ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದ್ಲಲಿದೆ. ಇದರ ಪರಿಣಾಮ ರಾಜ್ಯದಲ್ಲಿ ಹಿಂಗಾರು ಮಳೆ ಸದ್ಯ ದುರ್ಬಲವಾಗಿದೆ. ಈ ಬಾರಿಯ ಮಳೆ ಮತ್ತು ಚಂಡಮಾರುತಗಳ ಪರಿಣಾಮ ಇಂದಿನಿಂದ ರಾಜ್ಯದ ಉತ್ತರ ಒಳನಾಡಿನಲ್ಲಿ ತೀವ್ರ ಶೀತಗಾಳಿ ಉಂಟಾಗಲಿದ್ದು, ಮೂರು ದಿನಗಳ ಕಾಲ ತಾಪಮಾನದಲ್ಲಿ ಸಾಕಷ್ಟು ಇಳಿಕೆ ಕಂಡುಬರಲಿದೆ" ಎಂದು ಬೆಂಗಳೂರು ಹವಾಮಾನ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ತೀವ್ರ ಚಳಿಗೆ ನಡುಗುತ್ತಿದೆ ಉತ್ತರ ಭಾರತ: ಬಡವರಿಗೆ, ನಿರ್ಗತಿಕರ ನೆರವಿಗೆ ಇವೆ ಆಶ್ರಯಧಾಮಗಳು!