Health Benefits of Raw Papaya: ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ವೈದ್ಯರು ಕೂಡ ಪ್ರತಿದಿನ ಕೆಲವು ಹಣ್ಣುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಅದರಲ್ಲಿ ಪಪ್ಪಾಯಿ ಕೂಡ ಒಂದಾಗಿದೆ. ಯಾವುದೇ ಋತುವಿನ ಲೆಕ್ಕವಿಲ್ಲದೆ ಈ ಹಣ್ಣು ಲಭ್ಯವಿರುತ್ತದೆ. ಇದು ರುವಿಕರ ಮಾತ್ರವಲ್ಲದೇ, ವಿಟಮಿನ್ ಹಾಗೂ ಮಿನರಲ್ಸ್ ಸೇರಿದಂತೆ ವಿವಿಧ ಸಮೃದ್ಧವಾದ ಪೋಷಕಾಂಶಗಳನ್ನು ಸಹ ಒಳಗೊಂಡಿವೆ. ಸಾಮಾನ್ಯವಾಗಿ ಎಲ್ಲರೂ ಪಪ್ಪಾಯಿ ಹಣ್ಣಾದ ಬಳಿಕ ತಿನ್ನುತ್ತಾರೆ. ಆದರೆ, ಪಪ್ಪಾಯಿ ಹಣ್ಣಿನ ಹಂತಕ್ಕಿಂತ ಮುನ್ನವೇ ಅಂದ್ರೆ, ಹಸಿರು ಪಪ್ಪಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಹಸಿರು ಪಪ್ಪಾಯಿಯಿಂದ ಆರೋಗ್ಯಕ್ಕೆ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ತಿಳಿಯೋಣ.
ಜೀರ್ಣಕ್ರಿಯೆಗೆ ಉತ್ತಮ: ಹಸಿರು ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಗ್ಯಾಸ್ಟ್ರಿಕ್ ಆಮ್ಲಗಳ ಸ್ರವಿಸುವಿಕೆಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ. ಇದರಲ್ಲಿರುವ ಕಿಣ್ವಗಳು ಹೊಟ್ಟೆಯ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತವೆ. ಇದರ ಪರಿಣಾಮವಾಗಿ ಜೀರ್ಣಕ್ರಿಯೆಯು ಸುಧಾರಿಸುತ್ತದೆ ಹಾಗೂ ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ಕ್ಯಾನ್ಸರ್ ಬರದಂತೆ ತಡೆಯುತ್ತೆ: ಹಸಿ ಪಪ್ಪಾಯಿಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾದ ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್ ದೇಹದಿಂದ ಹಾನಿಕಾರಕ ಅಂಶಗಳನ್ನು ತೆಗೆದುಹಾಕುತ್ತದೆ. ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ವಿಶೇಷವಾಗಿ ಪುರುಷರಲ್ಲಿ ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್‌ನಂತಹ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ತಜ್ಞರು ಮಾಹಿತಿ ನೀಡುತ್ತಾರೆ. ಅನೇಕ ಅಧ್ಯಯನಗಳು ಸಹ ಇದೇ ಮಾಹಿತಿಯನ್ನು ಸ್ಪಷ್ಟಪಡಿಸಿವೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಸದಸ್ಯರ ತಂಡ ಕೂಡ ಇದೇ ಅಂಶವನ್ನು ಅಧ್ಯಯನದಲ್ಲಿ ತಿಳಿಸಿದೆ.
ಜಾಂಡೀಸ್: ಜಾಂಡೀಸ್ ತಡೆಗಟ್ಟುವಲ್ಲಿ ಹಸಿರು ಪಪ್ಪಾಯಿ ತುಂಬಾ ಪ್ರಯೋಜನಕಾರಿ. ಪ್ರತಿ ಮೂರು ಗಂಟೆಗಳಿಗೊಮ್ಮೆ ಅರ್ಧ ಗ್ಲಾಸ್ ಪಪ್ಪಾಯಿ ರಸವನ್ನು ಕುಡಿಯುವುದು ಜಾಂಡೀಸ್ ನಿವಾರಿಸುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಮಲೇರಿಯಾ: ಪಪ್ಪಾಯಿಯಲ್ಲಿರುವ ವಿಟಮಿನ್ ಎ ಹಾಗೂ ಸಿ ರೋಗಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಸಹಾಯಕವಾಗಿದೆ. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಮಲೇರಿಯಾ ಮತ್ತು ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ದೇಹದಲ್ಲಿನ ಉರಿಯೂತ ಕಡಿಮೆ ಮಾಡುತ್ತೆ: ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಹಸಿರು ಪಪ್ಪಾಯಿ ಸಹಾಯ ಮಾಡುತ್ತದೆ. ಗಂಟಲಿನ ಸೋಂಕು, ಉಸಿರಾಟದ ಸೋಂಕು, ಮುಟ್ಟಿನ ಸೆಳೆತ ಸೇರಿದಂತೆ ದೇಹದಲ್ಲಿನ ಹಲವು ರೀತಿಯ ನೋವು, ಉರಿಯೂತ ಹಾಗೂ ಊತ ಕಡಿಮೆ ಮಾಡುವಲ್ಲಿ ಹಸಿರು ಪಪ್ಪಾಯಿಯಲ್ಲಿರುವ ಪೋಷಕಾಂಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.
ತೂಕ ಇಳಿಕೆಗೆ ಒಳ್ಳೆಯದು: ಹಸಿರು ಪಪ್ಪಾಯಿಯಲ್ಲಿ ಕ್ಯಾಲೋರಿ ಕಡಿಮೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದಂತಾಗುತ್ತದೆ. ಇದರಿಂದ ಅನಗತ್ಯ ಆಹಾರ ಸೇವನೆ ಕಡಿಮೆಯಾಗುತ್ತದೆ. ಇದರಿಂದ ತೂಕವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಸಂಶೋಧಕರು.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹದು: https://pmc.ncbi.nlm.nih.gov/articles/PMC11467756/
ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇವುಗಳನ್ನೂ ಓದಿ: |