ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಯೂ ಮೈಕ್ರೋ ಫೈನಾನ್ಸ್ ದಂಧೆಕೋರರ ವ್ಯವಹಾರ ಜೋರಾಗಿದೆ. ಜಿಲ್ಲೆಯ ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರದ ಕೆಲವೆಡೆ ಈ ಮೀಟರ್ ಬಡ್ಡಿ ದಂಧೆಗೆ ಸಿಲುಕಿರುವವರು ಶೇ.30ರಷ್ಟು ಬಡ್ಡಿಕಟ್ಟಿದರೂ ಅಸಲು ಚುಕ್ತಾ ಮಾಡಲು ಸಾಧ್ಯವಾಗದೇ ಕೆಲವರು ಊರನ್ನೇ ತೊರೆಯುವ ಹಂತಕ್ಕೆ ತಲುಪಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಜಾರಿಗೆ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 20, 30 ಸಾವಿರ ಸಾಲ ನೀಡಿ ಖಾಲಿ ಚೆಕ್ಗೆ ಸಹಿ ಹಾಕಿಸಿಕೊಂಡು ಬಡ್ಡಿ, ಅಸಲು ಹಣ ಪಡೆದು ಕೊನೆಗೆ ಮತ್ತೆ ಹಣಕ್ಕೆ ಬೇಡಿಕೆ ಇಡುವ ಕೆಲವು ಫೈನಾನ್ಸ್ಗಳು ಕಾಲಿ ಚೆಕ್ ಬಳಸಿ ಸಾಲ ಪಡೆದವರಿಗೆ ಕೋರ್ಟ್ನಲ್ಲಿ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿವೆ.
ದಾಂಡೇಲಿಯ ಹಸೀನಾ ಶೇಖ್ ಎಂಬುವವರು ಫೈನಾನ್ಸ್ನಲ್ಲಿ ಸಾಲ ಪಡೆದು ಬಡ್ಡಿ ಅಸಲು ಕಟ್ಟಿದ್ದರೂ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಇದೀಗ ಈ ಮಹಿಳೆ ಗ್ರಾಮ ತೊರೆದಿದ್ದಾಳೆ. ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದು, ಮುಖ್ಯಮಂತ್ರಿಗಳಿಗೆ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾಳೆ.
"ಹಳಿಯಾಳ, ದಾಂಡೇಲಿ, ಜೋಯಿಡಾ ಭಾಗದಲ್ಲಿ ಮೈಕ್ರೋ ಫೈನಾನ್ಸ್ ದಂಧೆ ಕರಾಳವಾಗಿ ನಡೆಯುತ್ತಿದೆ. ಎಂಒಬಿ ಲೀಸ್ಟ್ನಲ್ಲಿರುವ ರೌಡಿಗಳೇ ಇದರ ಕಿಂಗ್ಫಿನ್ಗಳಾಗಿದ್ದು, ಪುಡಿ ರೌಡಿಗಳನ್ನು ಸಾಲ, ಬಡ್ಡಿ ವಸೂಲಿಗೆ ಬಿಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಮನೆಗೆ ನುಗ್ಗಿ ಸಾಲ ವಸೂಲಿಗೆ ಇಳಿಯುತಿದ್ದು ಇದೀಗ ಸಾಲ ಪಡೆದವರು ಮನೆ ಬಿಡುವಂತಾಗಿದೆ. ಒಂದು ಕಾಲದಲ್ಲಿ ತಿನ್ನಲು ಏನು ಇಲ್ಲದಂತೆ ಸುತ್ತಾಡುತ್ತಿದ್ದವರು ಇದೀಗ ಈ ವ್ಯವಹಾರದಲ್ಲಿ ತೊಡಗಿಕೊಂಡು ಬಡವರ ರಕ್ತ ಹೀರುತ್ತಿದ್ದಾರೆ. ಚೆಕ್ ಬೌನ್ಸ್ ಪ್ರಕರಣಗಳನ್ನು ಕೋರ್ಟ್ನಲ್ಲಿ ಹಾಕಿ ಹಣ ವಸೂಲಾತಿ ಮಾಡುತ್ತಿದ್ದಾರೆ. ಅಲ್ಲದೇ 20-40 ಪರ್ಸೆಂಟ್ವರೆಗೂ ಬಡ್ಡಿ ವಸೂಲಾತಿ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಾದರೂ ಯಾವುದೇ ಕ್ರಮವಾಗಿಲ್ಲ. ಇನ್ನಾದರೂ ಈ ಬಗ್ಗೆ ಇಲಾಖೆಗಳು ಎಚ್ಚೆತ್ತಕೊಳ್ಳಬೇಕು. ಈ ಬಗ್ಗೆ ಸೂಕ್ತ ತನಿಖೆ ಕೂಡ ನಡೆಸಬೇಕು" ಎಂದು ಸ್ಥಳೀಯ ಯೋಗರಾಜ್ ಆಗ್ರಹಿಸಿದ್ದಾರೆ.
ಪ್ರಕರಣವನ್ನು ಪರಿಗಣಿಸಿದ ಪೊಲೀಸ್ ಇಲಾಖೆ ಕೂಡ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.
"ಜಿಲ್ಲೆಯಲ್ಲಿ ಈವರೆಗೆ ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ಸಂಬಂಧ 7 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹಲವರು ಬಡ್ಡಿ ದಂಧೆಯಲ್ಲಿ ಸಿಲುಕಿದ್ದಾರೆ. ಆದರೆ, ದೂರು ಕೊಡುತ್ತಿಲ್ಲ. ಅನೇಕರು ಚೆಕ್ ಬೌನ್ಸ್ ಹಾಗೂ ಪುಡಿ ರೌಡಿಗಳಿಗೆ ಹೆದರುತ್ತಾರೆ. ಕೆಲವರು ನಮಗೆ ಗೌಪ್ಯವಾಗಿ ಮಾಹಿತಿ ಕೊಡುತ್ತಾರೆ. ಹೀಗೆ ಬಂದ ಮಾಹಿತಿ ಮೇರೆಗೆ ಓರ್ವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಮುಂಡಗೋಡ ಪಟ್ಟಣದ ನವಲೆ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 250ಕ್ಕೂ ಹೆಚ್ಚು ಖಾಲಿ ಚೆಕ್ಗಳು ಪತ್ತೆಯಾಗಿವೆ".
"ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಯಿಂದ ಜನ ಕಷ್ಟ ಅನುಭವಿಸುತ್ತಿದ್ದಾರೆ. ತಿಂಗಳಿಗೆ ಶೇ 30ರಷ್ಟು ಬಡ್ಡಿ ಕಟ್ಟುವ ದಂಧೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಮೀಟರ್ ಬಡ್ಡಿ ಹಾಗೂ ಮೈಕ್ರೋ ಫೈನಾನ್ಸ್ನಿಂದ ಕಿರುಕುಳವಾದರೆ ತಮ್ಮ
ಮೊಬೈಲ್ ಸಂಖ್ಯೆ 9480805201ಗೆ ಕರೆ ಮಾಡಿ ದೂರು ನೀಡಬಹುದು ಅಥವಾ ಎಸ್ಪಿ ಕಚೇರಿಗೂ ಆಗಮಿಸಿ ಗೌಪ್ಯವಾಗಿ ಮಾಹಿತಿ ನೀಡಬಹುದು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾಗಬೇಡಿ, ಸರ್ಕಾರ ನಿಮ್ಮ ಜೊತೆಗಿದೆ: ಸಿಎಂ ಸಿದ್ದರಾಮಯ್ಯ