ಮೈಸೂರು: ಬೈಕ್ ಸವಾರನೋರ್ವ ಕಾಡಾನೆ ದಾಳಿಯಿಂದ ಕೊಂಚದರಲ್ಲೇ ಪಾರಾದ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮೈಸೂರು - ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ.
ಸ್ವಲ್ಪದರಲ್ಲೇ ಪಾರಾದ ಬೈಕ್ ಸವಾರರು: ಇಬ್ಬರು ಬೈಕ್ನಲ್ಲಿ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಮಾನಂದವಾಡಿಯಿಂದ ಮೈಸೂರು ಕಡೆ ಬರುತ್ತಿದ್ದರು. ಈ ವೇಳೆ, ಕಾಡಿನಿಂದ ಏಕಾಏಕಿ ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ, ಯುವಕರ ಮೇಲೆ ದಾಳಿಗೆ ಮುಂದಾಗಿದೆ. ಆಗ ಚಾಲಕ ತಕ್ಷಣ ಬೈಕ್ ನಿಲ್ಲಿಸಿದ್ದಾನೆ. ಹಿಂಬದಿ ಸವಾರ ಬೈಕ್ನಿಂದ ಇಳಿದು ಹಿಂದಕ್ಕೆ ಓಡಿ ಬಂದಿದ್ದು, ಚಾಲಕ ಬೈಕ್ನ್ನು ಹಿಂತೆಗೆದುಕೊಂಡು ಬರುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಈ ವೇಳೆ ಸಮೀಪವೇ ಬಂದ ಕಾಡಾನೆ, ಅದೇ ರಸ್ತೆಯಲ್ಲಿ ಬಂದ ಲಾರಿ ಹಾರ್ನ್ ಶಬ್ದ ಹಾಗೂ ಚೀರಾಟ ಕಂಡು ಘೀಳಿಡುತ್ತಾ ರಸ್ತೆ ಪಕ್ಕಕ್ಕೆ ತೆರಳಿದೆ.
ಇದನ್ನೂ ಓದಿ: ಮೈಸೂರು: ಶರಣ ಸಂಗಮ ಮಠದಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು - ವಿಡಿಯೋ
ಲಾರಿ ಚಾಲಕನ ಸಮಯ ಪ್ರಜ್ಞೆ, ಬದುಕಿದವು ಜೀವಗಳು: ತಕ್ಷಣ ಸವಾರನೂ ಬೈಕ್ ಬಿಟ್ಟು ಓಡಿ ಬಂದಿದ್ದಾರೆ. ಸಮಯಪ್ರಜ್ಞೆ ಮೆರೆದ ಲಾರಿ ಚಾಲಕ ಅವರನ್ನು ತರಾತುರಿಯಲ್ಲಿ ಹತ್ತಿಸಿಕೊಂಡಿದ್ದಾನೆ. ಹೀಗಾಗಿ, ಯುವಕರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಅದನ್ನು ಕಂಡ ಕಾಡಾನೆ ಏನೂ ಮಾಡಲಾಗದೇ ರಸ್ತೆ ಪಕ್ಕದಲ್ಲೇ ನಿಂತಿದೆ. ಘಟನೆ ದೃಶ್ಯವು ಬೈಕ್ ಹಿಂಬದಿ ಸವಾರದ ಹೆಲ್ಮೆಟ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Watch in video: ಕೆರೆ ಹಾವು ನುಂಗಿ ನರಳಾಡುತ್ತಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಜಿಂಕೆ ಬೇಟೆಯಾಡಿದ ಕಾಡು ನಾಯಿಗಳು: ಇನ್ನೊಂದೆಡೆ, ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಾಡು ನಾಯಿಗಳ ಗುಂಪೊಂದು ಜಿಂಕೆಯನ್ನು ಬೇಟೆಯಾಡಿದೆ. ಇದರ ವಿಡಿಯೋವನ್ನು ಸಫಾರಿಗರು ಸೆರೆಹಿಡಿದಿದ್ದಾರೆ. ಕಾಡು ನಾಯಿಗಳ ಗುಂಪಿಂದ ತಪ್ಪಿಸಿಕೊಳ್ಳಲು ಜಿಂಕೆ ಹರಸಾಹಸಪಟ್ಟರೂ ಸಹ ಸಫಲವಾಗಲಿಲ್ಲ. ಒಂಟಿ ಜಿಂಕೆಯನ್ನು ಸುತ್ತುವರಿದ ಆರಕ್ಕೂ ಕಾಡುನಾಯಿಗಳು, ಕೊಂದು ತಿಂದಿವೆ. ಕಾಡು ನಾಯಿಗಳಿರುವ ದೇಶದ ಏಕೈಕ ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಅಭಯಾರಣ್ಯ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿದೆ.
ಇದನ್ನೂ ಓದಿ: ಕರುವಿನ ರಕ್ತದ ರುಚಿ ನೋಡಿ ಮತ್ತೆ ಬೇಟೆಗೆ ಬಂದ ಚಿರತೆ ಸೆರೆ : ವಿಡಿಯೋ