ಬೆಂಗಳೂರು:ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಎಸ್ ಸಂಜನಾ ಮುಂಬೈ ಇಂಡಿಯನ್ಸ್ಗೆ 4 ವಿಕೆಟ್ ರೋಚಕ ಜಯ ತಂದಿತ್ತರು. 172 ರನ್ ಗುರಿ ಬೆನ್ನಟ್ಟಿದ ಹಾಲಿ ಚಾಂಪಿಯನ್ಸ್ ಮುಂಬೈ ತಂಡ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ಬ್ಯಾಟಿಂಗ್ಗಿಳಿದ ಡೆಲ್ಲಿ ಕ್ಯಾಪಿಟಲ್ಸ್ ಮೂರು ರನ್ ಆಗುವಷ್ಟರಲ್ಲೇ ಶಫಾಲಿ ವರ್ಮಾ (1) ವಿಕೆಟ್ ಕಳೆದುಕೊಂಡಿತು. ಬಳಿಕ ನಾಯಕಿ ಲ್ಯಾನ್ನಿಂಗ್ (31) ಹಾಗೂ ಅರ್ಧಶತಕ ಬಾರಿಸಿದ ಆಲಿಸ್ ಕ್ಯಾಪ್ಸಿ (75) ತಂಡಕ್ಕೆ ಆಸರೆಯಾದರು. ಬಳಿಕ ಅಂತಿಮ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಜೆಪಿಮಾ ರೋಡ್ರಿಗಸ್ 42 (24 ಎಸೆತ) ಹಾಗೂ ಮರಿಜಾನ್ನೆ ಕಪ್ (16, 9 ಎಸೆತ) ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆ ಹಾಕಿತ್ತು.
ಮುಂಬೈಗೆ ಯಸ್ತಿಕಾ, ಕೌರ್ ಬಲ:172 ರನ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ಗೆ ಎರಡನೇ ಎಸೆತದಲ್ಲೇ ಹೇಲಿ ಮ್ಯಾಥ್ಯೂಸ್ ಔಟಾಗುವ ಮೂಲಕ ಆಘಾತ ಎದುರಾಯಿತು. ಬಳಿಕ ವಿಕೆಟ್ ಕೀಪಿಂಗ್ ಬ್ಯಾಟರ್ ಯಶ್ತಿಕಾ ಭಾಟಿಯಾ (57) ಅರ್ಧಶತಕ ಬಾರಿಸಿ ಆಸರೆಯಾದರು. ಇವರಿಗೆ 19 ರನ್ ಗಳಿಸಿದ ನ್ಯಾಟ್ ಸ್ಕಿವರ್ - ಬ್ರಂಟ್ ಉತ್ತಮ ಸಾಥ್ ನೀಡಿದರು. ಬಳಿಕ ಕ್ರೀಸ್ಗೆ ಬಂದ ನಾಯಕಿ ಹರ್ಮನ್ ಭರ್ಜರಿ ಅರ್ಧಶತಕ (55, 34 ಎಸೆತ) ದಾಖಲಿಸಿ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದರು.