ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಮ್ಮ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ನಮ್ಮಲ್ಲಿ ತಜ್ಞ ನ್ಯೂರೋಲಾಜಿಸ್ಟ್, ಫಿಸಿಶಿಯನ್ ಮತ್ತು ಆರ್ಥೋ ಫಿಸಿಶಿಯನ್ಸ್ ಇರುವುದರಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರವಿ ಪಾಟೀಲ ತಿಳಿಸಿದರು.
ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಅವರ ಚಾಲಕ ಮತ್ತು ಗನ್ಮ್ಯಾನ್ ಬೆಳಗ್ಗೆ 6 ಗಂಟೆಗೆ ನಮ್ಮ ಆಸ್ಪತ್ರೆಗೆ ಆಗಮಿಸಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೆನ್ನು ಮತ್ತು ಕುತ್ತಿಗೆ ಭಾಗಕ್ಕೆ ಗಾಯವಾಗಿತ್ತು. ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದೇವೆ ಎಂದರು.
ಬಳಿಕ ಅವರಿಗೆ ಎಂಆರ್‌ಐ ಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಬೆನ್ನು ಹುರಿಯಲ್ಲಿರುವ ಎಲ್-1, ಎಲ್-4 ಎಲುಬುಗಳಿಗೆ ಫ್ರಾಕ್ಚರ್ ಆಗಿರುವುದು ದೃಢವಾಯಿತು. ಹಾಗಾಗಿ, ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ನೋವು ಹೆಚ್ಚಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನು ಚನ್ನರಾಜ ಹಟ್ಟಿಹೊಳಿ ಅವರ ತಲೆಗೆ ಪೆಟ್ಟಾಗಿತ್ತು. ಅವರಿಗೆ ಸಿಟಿ ಸ್ಕ್ಯಾನ್ ಮಾಡಿದ್ದೇವೆ. ಅದರಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಕಂಡು ಬಂದಿದೆ. ಹಾಗಾಗಿ, ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಏರ್ಬ್ಯಾಗ್ ಓಪನ್ ಆಗಿ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ಹೆಬ್ಬೆಟ್ಟಿಗೆ ಬಲವಾಗಿ ಗಾಯವಾಗಿದೆ. ಗನ್ಮ್ಯಾನ್ಗೆ ಬುಜ ಮತ್ತು ಎದೆಗೆ ಗಾಯವಾಗಿದೆ. ಇಬ್ಬರಿಗೂ ಯಾವುದೇ ರೀತಿ ಗಂಭೀರ ಗಾಯಗಳಲಾಗಿಲ್ಲ. ಆದ್ದರಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೋವು ಕಡಿಮೆ ಆಗಿರುವುದನ್ನು ದೃಢಪಡಿಸಿಕೊಂಡು, ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಸದ್ಯ ಊಟಕ್ಕೆ ಅವರಿಗೆ ಗಂಜಿ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಸಿ.ಟಿ.ರವಿ
ಇದನ್ನೂ ಓದಿ: ಮುಖ್ಯಮಂತ್ರಿಗಳು ಕರೆ ಮಾಡಿ ಆಶೀರ್ವಾದ ಮಾಡಿದ್ದಾರೆ: ಮೃಣಾಲ್ ಹೆಬ್ಬಾಳ್ಕರ್