BCCI New Rules: ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲನಭವಿಸಿತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಿಂದ ಸೋಲನುಭವಿಸಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಿಂದಲೂ ಹೊರಬಿದ್ದಿದೆ. ಇದಕ್ಕೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು.
ಟೀಂ ಇಂಡಿಯಾದ ಈ ಸೋಲಿನ ಬೆನ್ನಲ್ಲೆ ಬಿಸಿಸಿಐ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಹಿನ್ನೆಲೆ ಇತ್ತೀಚೆಗೆ ನಡೆದ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಅದರಲ್ಲಿ ಕ್ರಿಕೆಟಿಗರ ಕುಟುಂಬಕ್ಕೆ ನೀಡಿರುವ ಸೌಲಭ್ಯಗಳನ್ನು ಕಡಿತಗೊಳಿಸುವ ಬಗ್ಗೆಯೂ ನಿರ್ಧರಿಸಲಾಗಿದೆ. ಜೊತೆಗೆ ಕೋಚ್ ಗೌತಮ್ ಗಂಭೀರ್ಗೆ ನೀಡಲಾಗಿದ್ದ ಕೆಲ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ ಎಂದು ಕ್ರಿಕೆಟ್ ಮೂಲಗಳು ಬಹಿರಂಗ ಪಡಿಸಿವೆ.
ಬಿಸಿಸಿಐ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಈ ಹಿಂದೆ ಯಾರಿಗೂ ನೀಡದ ಅಧಿಕಾರ ಮತ್ತು ಸ್ವಾತಂತ್ರ್ಯಗಳನ್ನು ಬಿಸಿಸಿಐ ನೀಡಿತ್ತು. ತಂಡದ ಆಯ್ಕೆಯ ಜೊತೆಗೆ, ಸಹಾಯಕ ತರಬೇತುದಾರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇಷ್ಟೆಲ್ಲ ಮಾಡಿದರೂ ಟೀಂ ಇಂಡಿಯಾದಿಂದ ನಿರೀಕ್ಷಿಸಿದ ಫಲಿತಾಂಶ ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಗಂಭೀರ್ಗೆ ನೀಡಲಾಗಿದ್ದ ಸ್ವಾತಂತ್ರ್ಯವನ್ನು ಕಡಿತಗೊಳಿಸಲು ಮುಂದಾಗಿದೆ.
ಕುಟುಂಬ ಸೌಲಭ್ಯ ಕಟ್: ಹಿರಿಯ ಆಟಗಾರರಾದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ವಿಷಯದಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ ಎಂದು ತೋರುತ್ತದೆ. 2019 ರಿಂದ, ಭಾರತದ ಹಿರಿಯ ಆಟಗಾರರು ಕ್ರಿಕೆಟ್ ಪಂದ್ಯಗಳಿಗಾಗಿ ವಿದೇಶಿ ಪ್ರವಾಸಕ್ಕೆ ತೆರಳಿದರೆ ಕುಟುಂಬ ಸದಸ್ಯರು (ಪತ್ನಿ, ಮಕ್ಕಳು) ಅವರೊಂದಿಗೆ ಹೋಗಲು ಅನುಮತಿ ನೀಡಿತ್ತು.
ಆದರೆ, ಇದರಿಂದ ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪರಿಗಣಿಸಿರುವ ಬಿಸಿಸಿಐ ಇನ್ಮುಂದೆ ಪತ್ನಿ ಸೇರಿದಂತೆ ಕುಟುಂಬದ ಯಾವೊಬ್ಬ ಸದಸ್ಯರಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ವರದಿಯಾಗಿದೆ. ಐದು ವರ್ಷಗಳ ಹಿಂದೆ ಜಾರಿಯಲ್ಲಿದ್ದ ನಿಯಮಗಳನ್ನು ಮರಳಿ ತರಲು ಬಿಸಿಸಿ ಯೋಚಿಸುತ್ತಿದೆ.
14 ದಿನ ಅವಕಾಶ: ಒಂದು ವೇಳೆ ವಿದೇಶಿ ಪ್ರವಾಸ 45 ದಿನಕ್ಕೂ ಮೇಲಿದ್ದರೆ ಕುಟುಂಬ ಸದಸ್ಯರಿಗೆ 14 ದಿನಗಳು ತಮ್ಮ ಮಾತ್ರ ಇರಲು ಅವಕಾಶವಿರುತ್ತದೆ. ಒಂದು ವೇಳೆ ಒಂದು ತಿಂಗಳಿಗೂ ಕಡಿಮೆ ಪ್ರವಾಸ ಇದ್ದರೇ ಕುಟುಂಬ ಸದಸ್ಯರಿಗೆ 7 ದಿನದ ಅವಕಾಶ ನೀಡಲಾಗುತ್ತದೆ. ಇದಲ್ಲದೇ ತಂಡದ ಎಲ್ಲ ಸದಸ್ಯರು ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕು.
ಜೊತೆಗೆ ಗೌತಮ್ ಗಂಭೀರ್ ಅವರ ಪರ್ಸನಲ್ ಮ್ಯಾನೆಜರ್ ವಿರುದ್ಧವೂ ಕಠಿಣ ಕ್ರಮ ಕೈಗೊಂಡಿದ್ದು ಇನ್ಮುಂದೆ ಅವರು ವಿಐಪಿ ಬಾಕ್ಸ್ನಲ್ಲಿ ಕುಳಿತುಕೊಳ್ಳುವಂತಿಲ್ಲ ಮತ್ತು ತಂಡದ ಬಸ್‌ನಲ್ಲಿ ಸವಾರಿ ಮಾಡುವಂತಿಲ್ಲ. ತಂಡವೂ ತಂಗಿರುವ ಹೋಟೆಲ್‌ನಲ್ಲೂ ಇರುವಂತಿಲ್ಲ.
ಹೆಚ್ಚುವರಿ ಶುಲ್ಕ ಕಟ್: ಆಟಗಾರರ ಲಗೇಜ್ 150 ಕೆಜಿಗಿಂತ ಹೆಚ್ಚು ತೂಕವಿದ್ದರೆ, ಬಿಸಿಸಿಐ ಹೆಚ್ಚುವರಿ ಶುಲ್ಕವನ್ನು ಪಾವತಿಸುವುದಿಲ್ಲ. ಅದಕ್ಕೆ ಆಟಗಾರರೆ ಹಣ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಪಂತ್-ಬುಮ್ರಾ ಅಲ್ಲ! 23 ವರ್ಷದ ಆಟಗಾರಗೆ ಟೀಂ ಇಂಡಿಯಾದ ನಾಯಕ ಮಾಡಲು ಬಯಸಿದ ಗಂಭೀರ್!