ಬೆಂಗಳೂರು: ಅಕಾಡೆಮಿ ಹಾಗೂ ಪ್ರಾಧಿಕಾರಿಗಳಿಗೆ ಅನುದಾನ ನೀಡಿಕೆ ವಿಚಾರದಲ್ಲಿ ತಡವಾಗುವ ಪ್ರಶ್ನೆಯೇ ಇಲ್ಲ. ಅಕಾಡೆಮಿಗಳಿಗೆ ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿಯಲ್ಲಿ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ 'ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ' ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಅನುದಾನ ನೀಡಿಕೆ ವಿಚಾರದಲ್ಲಿ ತಡವಾಗುತ್ತಿದೆ ಎಂಬ ಸಾಣೇಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಅಕಾಡೆಮಿಗಳಿಗೆ ನೇಮಕಾತಿಯನ್ನೇ ಮಾಡುತ್ತಿರಲಿಲ್ಲ. ನಾವು ಎಲ್ಲದ್ದಕ್ಕೂ ವೇಗ ನೀಡುವ ಕೆಲಸ ಮಾಡಿದ್ದೇವೆ. ಅನುದಾನ ನೀಡಿಕೆ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಗಳಾಗಿದ್ದರೆ ಅದನ್ನು ಬಗೆಹರಿಸಲಾಗಿವುದು ಎಂದು ತಿಳಿಸಿದರು.
ಶಿಕ್ಷಣ, ಸಂಘಟನೆಯಿಂದ ಸಮುದಾಯದ ಏಳಿಗೆ ಸಾಧ್ಯ: ಶಿಕ್ಷಣ, ಸಂಘಟನೆಯಿಂದ ಸಮುದಾಯಗಳ ಏಳ್ಗೆ ಸಾಧ್ಯ. ಭೋವಿ ಸಮುದಾಯದಲ್ಲಿ ಹೋರಾಟದ ಶಕ್ತಿ ಇದ್ದು, ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳ್ಗೆಗೆ ಹೋರಾಟ ನಡೆಸುವ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬರು ಸುಶಿಕ್ಷಿತರಾಗಬೇಕು, ಸಂಘಟಿತರಾಗಬೇಕು. ಈ ಮೂಲಕ ಸಂಘಟಿತ ಹೋರಾಟ ಮಾಡಬೇಕು. ಸಮಾಜದ ಸಂಘಟನೆಯ ಜವಾಬ್ದಾರಿ ಇದ್ದರೆ, ನಮ್ಮ ಕಡೆ ಎಲ್ಲರೂ ತಿರುಗಿ ನೋಡುತ್ತಾರೆ. ಸಮಾಜದ ಸಂಘಟನೆ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ಹಿಂದಿನ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ದೊರಕಿರಲಿಲ್ಲ. ಈ ಹಿಂದೆ ಸಿದ್ದರಾಮಯ್ಯಗೆ ಮೂರು ಬೇಡಿಕೆಗಳನ್ನು ಇಟ್ಟಿದ್ದೆವು. ಅದರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು. ಅಲ್ಲದೇ, ಸಮುದಾಯದ ಒಬ್ಬರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಾತಿನಿಧ್ಯ ದೊರಕಲಿದೆ ಎಂದು ಭರವಸೆ ನೀಡಿದರು.
ಪ್ರಶಸ್ತಿ ಗೌರವ ಹೆಚ್ಚಿದೆ: ಸಾಣೇಹಳ್ಳಿ ಶ್ರೀಗಳಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೆ ಪ್ರಶಸ್ತಿಗೆ ಗೌರವ ಹೆಚ್ಚಾಗಿದೆ. ಪ್ರಶಸ್ತಿ ಆಯ್ಕೆ ವಿಚಾರದಲ್ಕಿ ಯಾವುದೇ ಪ್ರಭಾವ ಇರುವುದಿಲ್ಲ. ಸಮಾಜಕ್ಕೆ ನೇರವಾಗಿ ವಿಷಯವನ್ನು ತಿಳಿಸುವ ವ್ಯಕ್ತಿತ್ವ ಸಾಣೇಹಳ್ಳಿ ಶ್ರೀಗಳದ್ದು. ಶ್ರೀಗಳು ತಮ್ಮ ಮಠದ ಮೂಲಕ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾಯಕಯೋಗಿ ಸಿದ್ದರಾಮೇಶ್ವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು, ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಒಳ್ಳೆಯದು. ಬಸವಣ್ಣ ಅವರ ವಚನಗಳನ್ನು ಪ್ರಚಾರಪಡಿಸುವ ಹಿನ್ನೆಲೆಯಲ್ಲಿ ಸರ್ಕಾರ 'ವಚನ' ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮೇಶ್ವರ ಅವರ ಒಂದೊಂದು ವಚನಗಳು ಪ್ರತಿಯೊಬ್ಬರ ಬದುಕಿಗೆ ಆದರ್ಶವಾಗಿದೆ. ಅವರ ವಚನ ಸಾಹಿತ್ಯವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ಸಂಸ್ಕೃತಿ ಉಳಿಯಬೇಕಾದರೆ ರಂಗಭೂಮಿ ಬೆಳೆಯಬೇಕು. ಕಲೆಯನ್ನು ಉಳಿಸುವ ಸಂಘ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕರಾದ ಡಾ.ಧರಣಿದೇವಿ ಮಾಲಗತ್ತಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ: ವಾರ್ಷಿಕ ಪ್ರಶಸ್ತಿಗಳು ಪ್ರಕಟ