ಶಿವಮೊಗ್ಗ: ಚಂದನವನದ ಭರವಸೆಯ ನಟ ರೂಪೇಶ್ ಶೆಟ್ಟಿ ಮುಖ್ಯಭೂಮಿಕೆಯ 'ಅಧಿಪತ್ರ' ಚಿತ್ರ ತನ್ನ ಪ್ರಚಾರ ಪ್ರಾರಂಭಿಸಿದೆ. ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ 'ಅಧಿಪತ್ರ'ದಲ್ಲಿ ಕರಾವಳಿ ಭಾಗದ ಕಥೆ ಕಟ್ಟಿಕೊಡಲಾಗಿದೆ. ಬಿಡುಗಡೆ ಹೊಸ್ತಿಲಲ್ಲಿರುವ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ ಹೆಚ್ಚಿದೆ.
ಶಿವಮೊಗ್ಗದ ಶುಭಂ ಹೋಟೆಲ್ನಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಹಾಗೂ ನಾಯಕ ನಟಿ ಜಾಹ್ನವಿ ಶೆಟ್ಟಿ ಅಭಿಯನದ 'ಅಧಿಪತ್ರ' ಟ್ರೇಲರ್ ಅನಾವರಣಗೊಳಿಸಲಾಯಿತು. ಶಿವಮೊಗ್ಗ ನಾಡವರ ಯಾನೆ ಬಂಟರ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಟ್ರೇಲರ್ ಬಿಡುಗಡೆಗೊಳಿಸಿದ್ರು.
ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ನಟ ರೂಪೇಶ್ ಶೆಟ್ಟಿ, ಅಧಿಪತ್ರ ಸಿನಿಮಾದಲ್ಲಿ ಕಥೆಯೇ ಹಿರೋ. ಕಥೆಗೆ ಏನು ಬೇಕೋ ಅದನ್ನು ಚಿತ್ರದಲ್ಲಿ ಯಾವುದೇ ರಾಜಿ ಇಲ್ಲದೇ ಮಾಡಲಾಗಿದೆ. ಶಯನ್ ಶೆಟ್ಟಿ ಚಿತ್ರವನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಬೆಂಗಳೂರಿನಲ್ಲಿ ಎಲ್ಲರೂ ತಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಮಲೆನಾಡಿನಲ್ಲೂ ಸಹ ಚಿತ್ರ ಪ್ರೇಮಿಗಳಿದ್ದು, ಅವರ ಎದರು ನಮ್ಮ ಚಿತ್ರದ ಟ್ರೇಲರ್ ಅನಾವರಣಗೊಳಿಸಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಶಿವರಾಜ್ಕುಮಾರ್ ಭೇಟಿಯಾದ ಡಾಲಿ ಧನಂಜಯ್ - ಫೋಟೋ ಇಲ್ಲಿದೆ
ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಸಸ್ಪೆನ್ಸ್ ಹಾಗೂ ಹಾರರ್ ಮೂಲಕ ಹೇಳಲು ಚಿತ್ರದ ನಿರ್ದೇಶಕ ಶಯನ್ ಶೆಟ್ಟಿ ಹೊರಟಿದ್ದಾರೆ. ಸಿನಿಮಾ ಫೆಬ್ರವರಿ 7ರಂದು ಬಿಡುಗಡೆ ಆಗಲಿದೆ. ನಾಯಕ ರೂಪೇಶ್ ಶೆಟ್ಟಿ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಾಹ್ನವಿ ಅವರು ಇದೇ ಮೊದಲ ಬಾರಿ ನಾಯಕ ನಟಿಯಾಗಿ ನಟಿಸಿದ್ದಾರೆ. ಫೆಬ್ರವರಿ 7ರಂದು ಬಿಡುಗಡೆ ಆಗಲಿರುವ ತಮ್ಮ ಚಿತ್ರವನ್ನು ಚಲನಚಿತ್ರಮಂದಿರದಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಚಿತ್ರತಂಡ ವಿನಂತಿಸಿಕೊಂಡಿದೆ.
ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದಂದೇ ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ : ಮರಿ ಸಿಂಹನ ಫೋಟೋ ಹಂಚಿಕೊಂಡ ವಸಿಷ್ಠ ಸಿಂಹ