ಬೆಂಗಳೂರು: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಸುತ್ತಲಿನ ಸರ್ಕಾರಿ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಲ್ಲದೆ ಗ್ರಾಮಸ್ಥರು ಮತ್ತು ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶಿಸುವುದು ಮತ್ತು ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಉಚ್ಚಂಗಿದುರ್ಗ ನಿವಾಸಿ ಎ. ಮನೋಹರ ಸೇರಿದಂತೆ ಹನ್ನೆರಡು ಮಂದಿ ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪಠ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಜಯನಗರ ಜಿಲ್ಲಾಧಿಕಾರಿ, ಹರಪನಹಳ್ಳಿ ಉಪ ವಿಭಾಗಾಧಿಕಾರಿ, ಹರಪನಹಳ್ಳಿ ತಹಶೀಲ್ದಾರ್, ವಿಜಯನಗರ ಜಿ.ಪಂ ಸಿಇಒ ಹಾಗೂ ಒತ್ತುವರಿದಾರರು ಎನ್ನಲಾದ ಮೂವರು ಖಾಸಗಿ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಉಚ್ಚಂಗಿದುರ್ಗ ಗ್ರಾಮಕ್ಕೆ ಸೇರಿದ ಜಮೀನಿನ ಸರ್ವೆ ನಂಬರ್ 541ರಲ್ಲಿ 0-35 ಸೆಂಟ್ಸ್ ಸರ್ಕಾರಿ ಜಮೀನು ಇದ್ದು, ಈ ಜಮೀನಿನಲ್ಲಿ ಪುರಾತನ ಈಶ್ವರ ದೇವಸ್ಥಾನವಿದೆ. ಇದಕ್ಕೆ ಹೊಂದಿಕೊಂಡು ಒಂದು ಧರ್ಮಛತ್ರ ಇದೆ. ಈ ಧರ್ಮಛತ್ರ 1930ರಲ್ಲಿ ಉದ್ಘಾಟನೆಗೊಂಡಿದೆ. ಇದನ್ನು ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತಿದ್ದರು. ಆದರೆ, ಸ್ಥಳೀಯ ಪ್ರಭಾವಿಗಳಾದ ಎಂ.ಜಿ. ಉದಶಂಕ್ರಗೌಡ, ಎಂ.ಜಿ. ರಾಜಶೇಖರಗೌಡ, ಎಂ.ಜಿ. ಸಿದ್ದನಗೌಡ ಈ ಜಾಗ ಒತ್ತುವರಿ ಮಾಡಿಕೊಂಡು ಅಲ್ಲಿ 12 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಬೀಗ ಹಾಕಿ, ಗ್ರಾಮಸ್ಥರು ಮತ್ತು ಭಕ್ತಾಾದಿಗಳು ದೇವಸ್ಥಾನ ಹಾಗೂ ಧರ್ಮಛತ್ರ ಬಳಸದಂತೆ ಮಾಡಿದ್ದಾರೆ ಎಂದು ಎಂದು ಪೀಠಕ್ಕೆ ವಿವರಿಸಿದರು.
ಹೀಗಾಗಿ ಉಚ್ಚಂಗಿದುರ್ಗ ಗ್ರಾಮದ ಈಶ್ವರ ದೇವಸ್ಥಾನ ಮತ್ತು ಧರ್ಮಛತ್ರದ ಜಾಗ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು. ಈ ಸಂಬಂಧ ಅರ್ಜಿದಾರರು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ 2022ರ ಡಿಸೆಂಬರ್ 22 ಮತ್ತು 2023ರ ಫೆಬ್ರವರಿ 24ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: 'ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಅಸಾಧಾರಣ ಸಂದರ್ಭದಲ್ಲಿ ಮಾತ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬೇಕು'