ಸುತ್ತೂರು ಜಾತ್ರಾ ರಥೋತ್ಸವ ; ಡ್ರೋನ್ ಕ್ಯಾಮರಾದಲ್ಲಿ ಸಂಭ್ರಮ ಸೆರೆ - SUTTUR JATRA RATHOTSAVA
🎬 Watch Now: Feature Video
Published : Jan 28, 2025, 4:36 PM IST
ಮೈಸೂರು : ವಾರ್ಷಿಕ ಸುತ್ತೂರು ಜಾತ್ರಾ ಮಹೋತ್ಸವ ಇಂದು ಸಾಂಪ್ರದಾಯಿಕವಾಗಿ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜರುಗಿದೆ. ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಸುತ್ತೂರು ಶ್ರೀಗಳು ಚಾಲನೆ ನೀಡಿದರು.
ಸುತ್ತೂರು ಜಾತ್ರಾ ಮಹೋತ್ಸವದ ನಿಮಿತ್ತ ಇಂದು ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಸುತ್ತೂರಿನ ಕರ್ತೃ ಗದ್ದುಗೆಯ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಹೆಬ್ಬಾವಿನ ಗಾತ್ರದ ರಥದ ಹಗ್ಗವನ್ನು ಎಳೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.
ಇಂದು ಬೆಳಗ್ಗೆ 9.30 ಗಂಟೆಗೆ ಉತ್ಸವಮೂರ್ತಿಗೆ ರಾಜೋಪಚಾರ ನಡೆಸಿ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಅರ್ಚಕರು ಪೂಜಾ ವಿಧಿ - ವಿಧಾನ ಪೂರೈಸಿ 11 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥಕ್ಕೆ ಹಣ್ಣು- ಜವನ ಎಸೆದು ಭಕ್ತರು ಹರಕೆ ತೀರಿಸಿದರು. ಈ ವೇಳೆ, ಭಕ್ತ ಸಮೂಹದವರಿಂದ ತಮಟೆ, ನಗಾರಿ, ವಾದ್ಯಗಳ ನಾದವು ಮುಗಿಲು ಮುಟ್ಟಿತ್ತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ರಥೋತ್ಸವದಲ್ಲಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ದರು.
ಸುತ್ತೂರು ಮೂಲ ಮಠದಿಂದ ಹೊರಟ ರಥವು ದೊಡ್ಡಮ್ಮ ತಾಯಿ ದೇವಸ್ಥಾನದ ವೃತ್ತ ಬಳಸಿ ಕರ್ತೃ ಗದ್ದುಗೆ ಬಳಿ ಸಂಪನ್ನಗೊಂಡಿತ್ತು.
ಇದನ್ನೂ ಓದಿ : ಸುಮೇರು ಪರ್ವತದ ಮೇಲೆ ತ್ರಿವರ್ಣಧ್ವಜ: ಪಂಚಕಲ್ಯಾಣ, ಮಹಾಮಸ್ತಕಾಭಿಷೇಕ ಸಂಪನ್ನ - MAHAMASTAKABHISHEKA