ದುಪ್ಪಟ್ಟು ಹಣದ ಆಸೆ ತೋರಿಸಿ ಕೋಟ್ಯಂತರ ರೂ. ಪಂಗನಾಮ : ಡಿಸಿ ಮುಂದೆ ಕಣ್ಣೀರಿಟ್ಟ ಮಹಿಳೆಯರು - MONEY FRAUD
🎬 Watch Now: Feature Video
Published : Jan 25, 2025, 9:04 PM IST
ಚಾಮರಾಜನಗರ : ದುಪ್ಪಟ್ಟು ಹಣ ಕೊಡುವ ಆಸೆ ತೋರಿಸಿ ಚೀಟಿ ಕಟ್ಟಿಸಿಕೊಂಡ ಇಬ್ಬರು ಮಹಿಳೆಯರು ನೂರಾರು ಮಂದಿಗೆ ಪಂಗನಾಮ ಹಾಕಿರುವ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಉಪ್ಪಿನಮೋಳೆಯಲ್ಲಿ ನಡೆದಿದೆ.
ಉಪ್ಪಿನಮೋಳೆ ಗ್ರಾಮದವರೇ ಆದ ಚೌಡಮ್ಮ, ಸರಸ್ವತಿ ಎಂಬುವವರು ಒಟ್ಟು 246 ಮಂದಿ ಬಳಿ ಚೀಟಿ ಹಣ ಕಟ್ಟಿಸಿಕೊಂಡು ಸರಿಯಾಗಿ ಹಣ ಹಿಂತಿರುಗಿಸದೇ ಮೋಸ ಮಾಡಿದ್ದಾರೆ. ಇದೀಗ ಆ ಮಹಿಳೆಯರು ದುಪ್ಪಟ್ಟು ಹಣ ಬರುವುದಿರಲಿ, ಕಟ್ಟಿದ್ದ ಹಣವೂ ಇಲ್ಲದೇ ಪರದಾಡುತ್ತಿದ್ದಾರೆ. 1.45 ಕೋಟಿ ರೂ. ಹಣ ವಂಚನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಇಂದು ಉಪ್ಪಿನಮೋಳೆಯ ನೂರಾರು ಮಹಿಳೆಯರು ಡಿಸಿ ಶಿಲ್ಪಾನಾಗ್, ಎಸ್ಪಿ ಡಾ. ಬಿ. ಟಿ ಕವಿತಾ ಅವರನ್ನು ಭೇಟಿಯಾಗಿ ನಮಗೆ ಯಾವುದೇ ಬಡ್ಡಿಯೂ ಬೇಡ, ದುಪ್ಪಟ್ಟು ಹಣವೂ ಬೇಡ, ಕಷ್ಟಪಟ್ಟು ದುಡಿದ ಹಣವನ್ನು ನಾವು ಕೊಟ್ಟಿದ್ದೇವೆ. ನಮ್ಮ ಹಣ ನಮಗೆ ವಾಪಾಸ್ ಕೊಡಿಸಿ ಎಂದು ಕಣ್ಣೀರಿಟ್ಟರು.
ತನಿಖೆಗೆ ಸಮಿತಿ - ಹಣ ವಾಪಸ್ ಭರವಸೆ : ಈ ವೇಳೆ ಮಹಿಳೆಯರಿಗೆ ಧೈರ್ಯ ತುಂಬಿದ ಡಿಸಿ ಒಂದು ವಾರದಲ್ಲೇ ತನಿಖೆಗೆ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗುವುದು, ಶೀಘ್ರದಲ್ಲೇ ನಿಮ್ಮ ಹಣ ನಿಮಗೆ ಕೊಡಿಸುತ್ತೇವೆ. ಜಿಲ್ಲಾಡಳಿತ ನಿಮ್ಮ ಜೊತೆ ಇರಲಿದೆ, ಚಿಂತೆ ಮಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಚೀಟಿ ವಂಚನೆ ಆರೋಪ : ಹಣ ಕಳೆದುಕೊಂಡವರಿಂದ ಮಹಿಳೆ ಮನೆ ಮುಂದೆ ಪ್ರತಿಭಟನೆ - MONEY FRAUD ALLEGATION