'ಮಹಾವತಾರ್ ನರಸಿಂಹ' ಶೀರ್ಷಿಕೆಯ ಅನಿಮೇಟೆಡ್ ಫಿಲ್ಮ್ನ ಟೀಸರ್ ರಿಲೀಸ್ ಆಗಿದೆ. ಭಗವಾನ್ ವಿಷ್ಣುವಿನ ಮೇಲೆ ಭಕ್ತಪ್ರಹ್ಲಾದ ಹೊಂದಿರುವ ಭಕ್ತಿಯ ಪರಾಕಾಷ್ಠೆಯನ್ನು ಸಾರಲು ಹೊಂಬಾಳೆ ಫಿಲ್ಮ್ಸ್‌ನ ಹೊಸ ಸಿನಿಮಾ ಸಜ್ಜಾಗಿದೆ. ಭಕ್ತಿಯಾಧಾರಿತ ಕಥೆ ಇದೇ ಸಾಲಿನ ಏಪ್ರಿಲ್ಗೆ ತೆರೆಕಾಣಲಿದೆ.
ಭಕ್ತ ಪ್ರಹ್ಲಾದನ ಓಂ ಭಗವತೇ ವಾಸುದೇವಾಯ ಶ್ಲೋಕದೊಂದಿಗೆ ಟೀಸರ್ ಆರಂಭವಾಗಿದೆ. ನಿನ್ನ ಪುತ್ರನ ವೀರಗತಿಗಾಗಿ ಶೋಕಪಡಬೇಡ ಮಾತೆ. ಇದು ನಿನಗೆ ವಿಷ್ಣು ನೀಡಿರುವ ಬಹಿರಂಹ ಸವಾಲು ಎಂಬ ದನಿ ಕೇಳಿಬಂದಿದೆ.
ಮತ್ತೊಂದೆಡೆ, ನೀನು ನಿನ್ನ ಪುತ್ರನನ್ನು ಕೊಲ್ಲಲು ನೋಡುತ್ತಿರುವೆಯಾ? ಆದ್ರೆ, ಅವನು ತನ್ನ ಭಕ್ತನನ್ನು ಕಾಪಾಡಲು ಮುಂದಾಗಿದ್ದಾನೆ. ಈಗ ಈ ವಿಷಯ ಒಬ್ಬ ತಂದೆ ಮಗನ ಅನುಬಂಧಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಷಯ ವರ್ಚಸ್ಸಿನದ್ದು. ಪ್ರಹ್ಲಾದ ಎರಡು ಮಹಾರಥಿಗಳ ನಡುವೆ ಸಿಲುಕಿರುವ ಒಂದು ಕೈಗೊಂಬೆಯಷ್ಟೇ. ಮತ್ತಿನ್ನೇನೂ ಅಲ್ಲ ಎಂಬ ದನಿ ಹಿನ್ನೆಲೆಯಲ್ಲಿ ಕೇಳಿಬಂದಿದೆ.
ಇದಾದ ನಂತರ, ಇನ್ನು ಪ್ರತಿಕ್ಷಣವೂ ನನ್ನದೇ ಗುಣಗಾನ ಎನ್ನುವ ಹಿರಣ್ಯಕಶ್ಯಪುವಿನ ದನಿ ಕೇಳಿಬಂದಿದೆ. ಹಿರಣ್ಯಕಶ್ಯಪನೇ ಭಗವಂತ. ಹೇಳಿ.... ನಿನ್ನ ವಿಷ್ಣು ಸರ್ವವ್ಯಾಪಿ ಎಂದೇ ಅಲ್ಲವೇ? ಹಾಗಾದ್ರೆ, ಅವನು ಈ ಕಂಬದಲ್ಲಿರಬೇಕು ತಾನೇ? ಎಂದು ತಂದೆ ಹಿರಣ್ಯಕಶ್ಯಪು ಪ್ರಶ್ನಿಸುತ್ತಿದ್ದಂತೆ ಅವಶ್ಯವಾಗಿರುವನು ಎಂದು ಪುತ್ರ ಪ್ರಹ್ಲಾದ ಉತ್ತರಿಸಿದ್ದಾನೆ. ಕೂಡಲೇ ವಿಷ್ಣು ಪ್ರತ್ಯಕ್ಷವಾಗಿದ್ದಾನೆ. ವಿಷ್ಣುವಿನ ಪ್ರತ್ಯಕ್ಷ ನೋಡುಗನನ್ನು ಭಕ್ತಿಯ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದ್ದು, ಸಂಪೂರ್ಣ ನೋಟ ಇನ್ನಷ್ಟೇ ಸಿಗಬೇಕಿದೆ.
ಇದನ್ನೂ ಓದಿ: ಐಶ್ವರ್ಯಾ ರೈ ವಿರುದ್ಧದ ಸ್ಪರ್ಧೆಯಿಂದ ಆಧ್ಯಾತ್ಮಿಕತೆವರೆಗೆ: ನಟನೆ ತೊರೆದು ಸನ್ಯಾಸಿಯಾದ ಈ ನಟಿ ಬಗ್ಗೆ ನಿಮಗೆಷ್ಟು ಗೊತ್ತು?
ಬಹುನಿರೀಕ್ಷಿತ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, 'ಕತ್ತಲೆ ಮತ್ತು ಅವ್ಯವಸ್ಥೆಯಿಂದ ಛಿದ್ರಗೊಂಡ ಜಗತ್ತಿನಲ್ಲಿ... ನಂಬಿಕೆಗೆ ಸವಾಲು ಎದುರಾದಾಗ, ಅವನು ಕಾಣಿಸಿಕೊಳ್ಳುತ್ತಾನೆ'. ಮಹಾವತಾರ್ ನರಸಿಂಹ ಟೀಸರ್‌ನ ಘರ್ಜನೆಗೆ ಸಾಕ್ಷಿಯಾಗಿ. ಅತ್ಯಂತ ಉಗ್ರ, ಅರ್ಧ ಮನುಷ್ಯ, ಅರ್ಧ ಸಿಂಹ ಅವತಾರವಾದ ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಅವತಾರವನ್ನು ಕಣ್ತುಂಬಿಕೊಳ್ಳಿ. ಸಿನಿಮಾ ವಿಶ್ವದಾದ್ಯಂತ ಇದೇ ಸಾಲಿನ ಏಪ್ರಿಲ್ 3ರಂದು ತೆರೆಗಪ್ಪಳಿಸಲಿದೆ. ಈ ಚಿತ್ರ ಭಗವಾನ್ ನರಸಿಂಹನ ಪೌರಾಣಿಕ ಕಥೆಗೆ ಜೀವ ತುಂಬುವ ಒಂದು ಮಹಾಕಾವ್ಯ. ಶ್ರೀಮಂತಿಕೆಯಿಂದ ಕೂಡಿದ ಜಿಜಿ, ಸ್ಪೂರ್ತಿದಾಯಕ ನಿರೂಪಣೆಯೊಂದಿಗೆ ವಿಶ್ವದಾದ್ಯಂತದ ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆ ಇದೆ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಮಹಾ ಯುದ್ಧವನ್ನು 3ಡಿ ಅನಿಮೇಷನ್‌ನಲ್ಲಿ ನೋಡಿ ಆನಂದಿಸಿ. ರೋಮಾಂಚಕ ಸಾಹಸಕ್ಕಾಗಿ ನಮ್ಮೊಂದಿಗಿರಿ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: 'ಮೊದಲಿದ್ದಂತಿಲ್ಲ, ನೀನೇನು ನನಗೇಳೋದು': ಬಿಗ್ ಬಾಸ್ನಲ್ಲೇ ಅಂತ್ಯಕಾಣುತ್ತಾ ತ್ರಿವಿಕ್ರಮ್-ಭವ್ಯಾ ಸ್ನೇಹ?
ಅನಿಮೇಟೆಡ್ ಸಿನಿಮಾಗೆ ಅಶ್ವಿನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಶ್ವಿನ್ ನಿರ್ದೇಶನ ಮಾತ್ರವಲ್ಲದೇ ಸ್ಕ್ರೀನ್ಪ್ಲೇ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕ್ಲೀಮ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾಗೆ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ಬಂಡವಾಳ ಹೂಡಿದ್ದಾರೆ. ದಕ್ಷಿಣ ಚಿತ್ರರಂಗದ ಫೇಮಸ್ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ ಈ ಅನಿಮೇಟೆಡ್ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಏಪ್ರಿಲ್ 3ಕ್ಕೆ ಬಿಡುಗಡೆ ಆಗಲಿದೆ.