ಮಂಗಳೂರು(ದಕ್ಷಿಣ ಕನ್ನಡ): ಅದಾನಿ ವಿಮಾನ ನಿಲ್ದಾಣ ಹೋಲ್ಡಿಂಗ್ಸ್ ಲಿಮಿಟೆಡ್ (AAHL) ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಭಾನುವಾರ ಒಂದೇ ದಿನ ಅತಿಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದ ದಾಖಲೆ ಬರೆಯಿತು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಜನವರಿ 12, 2025ರಂದು ನಿಲ್ದಾಣವು 7,710 ಪ್ರಯಾಣಿಕರ ಆಗಮನ ಮತ್ತು ನಿರ್ಗಮನವನ್ನು ನಿರ್ವಹಿಸಿದೆ. ಇದು ನಿಲ್ದಾಣದ ವಾಣಿಜ್ಯ ಕಾರ್ಯಾಚರಣೆ ದಿನಾಂಕ 31 ಅಕ್ಟೋಬರ್ 2020ರ ನಂತರದ ಅತ್ಯಧಿಕ ಪ್ರಯಾಣಿಕ ನಿರ್ವಹಣೆಯಾಗಿದೆ.
ಭಾನುವಾರ ಪ್ರಯಾಣಿಸಿದ ಪ್ರಯಾಣಿಕರಲ್ಲಿ 7,613 ಮಂದಿ ವಯಸ್ಕರು ಮತ್ತು 97 ಶಿಶುಗಳು ಇದ್ದರು. 24 ಆಗಮನ ಮತ್ತು 25 ನಿರ್ಗಮನಗಳಲ್ಲಿ (ಒಟ್ಟು 49 ವಾಯು ಸಂಚಾರ) ಸಂಚಾರ ನಡೆದಿದೆ.
ನವೆಂಬರ್ 10, 2024ರಂದು 7,637 ಪ್ರಯಾಣಿಕರು 49 ವಾಯು ಸಂಚಾರಗಳೊಂದಿಗೆ ಪ್ರಯಾಣ ನಡೆದಿತ್ತು. ಜನವರಿ 11, 2025ರಂದು 48 ವಾಯು ಸಂಚಾರಗಳಲ್ಲಿ 7,538 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು.
ಜನವರಿ 4, 2025ರಂದು 7,613 ಪ್ರಯಾಣಿಕರು, ಡಿಸೆಂಬರ್ 31, 2023ರಂದು 7,548 ಪ್ರಯಾಣಿಕರು, ನವೆಂಬರ್ 25, 2023ರಂದು 7,452 ಪ್ರಯಾಣಿಕರು, ಆಗಸ್ಟ್ 15, 2024ರಂದು 7,406 ಪ್ರಯಾಣಿಕರು, ನವೆಂಬರ್ 19, 2023ರಂದು 7,399 ಪ್ರಯಾಣಿಕರು ಮತ್ತು ಡಿಸೆಂಬರ್ 10, 2023ರಂದು 7,350 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು ಎಂದು ವಿಮಾನ ನಿಲ್ದಾಣದ ಮಾಧ್ಯಮ ವಕ್ತಾರರು ಮಾಹಿತಿ ನೀಡಿದ್ದಾರೆ.