ನವದೆಹಲಿ:ಮುಂದಿನ ವರ್ಷ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಪಾಕ್ ಕ್ರಿಕೆಟ್ ಮಂಡಳಿಯು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿವೆ. ಆದ್ರೆ 9ನೇ ಆವೃತ್ತಿಯ ಈ ಟೂರ್ನಿಗೆ ಎರಡು ದೊಡ್ಡ ತಂಡಗಳು ಅರ್ಹತೆ ಪಡೆಯದೇ ಇರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ದಿಗ್ಗಜ ಆಟಗಾರರನ್ನು ಹೊಂದಿದ್ದ ಈ ತಂಡಗಳು ಹಿಂದೆ ವಿಶ್ವ ಚಾಂಪಿಯನ್ ಆಗಿಯೂ ಟ್ರೋಫಿ ಎತ್ತಿ ಹಿಡಿದಿದ್ದವು. ಅಂತಹ ತಂಡಗಳು ಅರ್ಹತೆ ಪಡೆಯದೆ ಹೊರಗುಳಿದಿವೆ. ಹಾಗಾದ್ರೆ ಆ ಎರಡು ತಂಡಗಳು ಯಾವುವು ಅನ್ನೋದನ್ನು ತಿಳಿಯೋಣ..
ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯದ ತಂಡಗಳು
ವೆಸ್ಟ್ ಇಂಡೀಸ್:ಈ ಪಟ್ಟಿಯಲ್ಲಿರುವ ದೊಡ್ಡ ತಂಡ ವೆಸ್ಟ್ ಇಂಡೀಸ್ ಆಗಿದೆ. 1975 ಮತ್ತು 1979 ರ ಏಕದಿನ ವಿಶ್ವಕಪ್ ಚಾಂಪಿಯನ್ ಮತ್ತು ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡ 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿಲ್ಲ. ಈ ಹಿಂದೆ ಕೆರಿಬಿಯನ್ ತಂಡ 2004ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು. ಆದರೆ ಕಳಪೆ ಪ್ರದರ್ಶನದಿಂದಾಗಿ ಈ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಇದು ಕೆರೆಬಿಯನ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ವೆಸ್ಟ್ ಇಂಡೀಸ್ ತಂಡ (IANS) ಶ್ರೀಲಂಕಾ:2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದೊಂದಿಗೆ ಜಂಟಿ ವಿಜೇತವಾಗಿದ್ದ ಶ್ರೀಲಂಕಾ ತಂಡ ಕೂಡ ಈ ಟೂರ್ನಿಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಇದು 1996ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಇಂತಹ ಬಲಿಷ್ಠ ತಂಡವನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ನೋಡಲಾಗುವುದಿಲ್ಲ. ಈ ಎರಡೂ ತಂಡಗಳನ್ನು ಹೊರತುಪಡಿಸಿ ಸ್ಕಾಟ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ತಂಡಗಳು ಕೂಡ ಅರ್ಹತೆ ಪಡೆಯುವಲ್ಲಿ ವಿಫಲವಾಗಿವೆ.
ಚಾಂಪಿಯನ್ಸ್ ಟ್ರೋಫಿ ಅರ್ಹತೆ ಮಾನದಂಡ:ಚಾಂಪಿಯನ್ಸ್ ಟ್ರೋಫಿಗೆ ಒಟ್ಟು 8 ತಂಡಗಳು ಅರ್ಹತೆ ಪಡೆಯುತ್ತವೆ. ಈ ಆವೃತ್ತಿಯ ಅರ್ಹತೆಯನ್ನು 2023ರ ಏಕದಿನ ವಿಶ್ವಕಪ್ನೊಂದಿಗೆ ಹೊಂದಿಕೆ ಮಾಡಲಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದುಕೊಳ್ಳುತ್ತವೆ.
ಕಳೆದ ವರ್ಷ ಭಾರತ ಆತಿಥ್ಯ ವಹಿಸಿದ್ದ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಅಂಕಪಟ್ಟಿಯಲ್ಲಿ ಟಾಪ್-8ರಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದೆ 9ನೇ ಸ್ಥಾನಕ್ಕೆ ತಲುಪಿತು. ಇದರ ಹೊರತಾಗಿ ವೆಸ್ಟ್ ಇಂಡೀಸ್, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಈ ಎಲ್ಲಾ ತಂಡಗಳು 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲವಾಗಿವೆ. ಆದರೆ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಅಫ್ಘಾನಿಸ್ತಾನವು ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದುಕೊಂಡಿದೆ.
ಇದನ್ನೂ ಓದಿ:ಕೈತಪ್ಪಿದ ಡೈಮಂಡ್ ಲೀಗ್ ಟ್ರೋಫಿ: ಎಕ್ಸ್-ರೇ ಸಮೇತ ಅಸಲಿ ಕಾರಣ ತಿಳಿಸಿದ ನೀರಜ್ ಚೋಪ್ರಾ - Neeraj Chopra