ಹುಬ್ಬಳ್ಳಿ: ಸಾಮಾನ್ಯವಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಬೇಕು ಅಂದ್ರೆ ಅದಕ್ಕೆ ತರಬೇತಿ ನೀಡಲು ಹಾಗೂ ಮಾರ್ಗದರ್ಶನ ಮಾಡಲು ಸಾಕಷ್ಟು ಕೋಚಿಂಗ್ ಸೆಂಟರ್ಗಳಿವೆ. ಆದರೆ ಕೆಪಿಟಿಸಿಎಲ್ನಲ್ಲಿ ಸೇವೆ ಸಲ್ಲಿಸುವ ಲೈನ್‌ಮ್ಯಾನ್ ಕೆಲಸ ಪಡೆಯಬೇಕಾದರೆ ದೈಹಿಕ ತರಬೇತಿ ಅತ್ಯವಶ್ಯಕ. ರಾಜ್ಯದಲ್ಲಿ ಎಲ್ಲೂ ಇಲ್ಲದ ಲೈನ್‌ಮ್ಯಾನ್ ದೈಹಿಕ ತರಬೇತಿ ಕೇಂದ್ರವೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದೆ.
ಇಲ್ಲಿನ ಲಿಂಗರಾಜ ನಗರದಲ್ಲಿ ವಿ.ಕೆ. ಪೋಲ್ ಕ್ಲೈಂಬಿಂಗ್ ಟ್ರೈನಿಂಗ್ ಸೆಂಟರ್ ಕಾರ್ಯೋನ್ಮುಖವಾಗಿದ್ದು, ಲೈನ್‌ಮ್ಯಾನ್ ಆಗುವ ನೂರಾರು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಕಲಬುರಗಿ ಮೂಲದ ವೆಂಕಟೇಶ್ ರಾಠೋಡ್ ಅವರು ಈ ಟ್ರೈನಿಂಗ್ ಸೆಂಟರ್ ಆರಂಭಿಸಿದ್ದು, ಅಭ್ಯರ್ಥಿಗಳಿಗೆ ಲೈನ್‌ಮ್ಯಾನ್ ನೇಮಕಕ್ಕೆ ಬೇಕಾಗುವ ದೈಹಿಕ ತರಬೇತಿಯನ್ನು ನೀಡುತ್ತಿದ್ದಾರೆ. ಈಗಾಗಲೇ ಇವರ ಹತ್ತಿರ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಸುಮಾರು 120ಕ್ಕೂ ಹೆಚ್ಚು ಅಭ್ಯರ್ಥಿಗಳು ಇಲ್ಲಿ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರೆ.
ತಮ್ಮ ಕನಸು ಹಾಗೂ ಈ ಕೇಂದ್ರ ಹುಟ್ಟು ಹಾಕಿದ ಕುರಿತಂತೆ ವೆಂಕಟೇಶ್ ರಾಠೋಡ್ ಅವರು ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ. "ನನ್ನ ತಂದೆ ಲೈನ್‌ಮ್ಯಾನ್ ಆಗಿದ್ದು, ತಂದೆಯಂತೆ ನಾನು ಕೂಡ ಲೈನ್‌ಮ್ಯಾನ್ ಆಗುವ ಕನಸು ಕಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಎದೆಗುಂದದೆ ನಾನು ನೌಕರಿ ಪಡೆಯಲು ವಿಫಲನಾದಂತೆ ಬೇರೆಯವರಿಗೂ ಆಗಬಾರದು ಎಂದು ನಿರ್ಧರಿಸಿ ಈ ಕೇಂದ್ರವನ್ನು ಹುಟ್ಟುಹಾಕಿದೆ. 2018ರಲ್ಲಿ ಲೈನ್‌ಮ್ಯಾನ್ ನೇಮಕಾತಿ ಅರ್ಜಿ ಕರೆದಾಗ 25-30 ಜನರಿಗೆ ತರಬೇತಿ ನೀಡಿದ್ದೆ. ಆಗ ಎಲ್ಲರೂ ನೇಮಕವಾದರು. ಅದಾದ ನಂತರ ಬೇರೆ ಬೇರೆ ರಾಜ್ಯಗಳ ಲೈನ್‌ಮ್ಯಾನ್ ನೋಟಿಫಿಕೇಶನ್ ಆದ ನಂತರ ಅಲ್ಲಿ ತರಬೇತಿ ಕೇಂದ್ರ ಆರಂಭಿಸಿ ಗೈಡ್ ಮಾಡಲು ಆರಂಭಿಸಿದೆ. ಚೆನ್ನೈ, ಹೈದರಾಬಾದ್, ವೈಜಾಗ್, ವಿಶಾಖಪಟ್ಟಣದಲ್ಲೂ ತರಬೇತಿ ನೀಡಿದ್ದೇನೆ" ಎಂದು ಹೇಳಿದರು.
ರಾಜ್ಯದಲ್ಲಿಯೂ ನೋಟಿಫಿಕೇಷನ್ ಆದ ಮೇಲೆ ಎಲ್ಲಿ ಕೇಂದ್ರ ತೆರೆಯಬೇಕು ಎಂದು ಯೋಚನೆ ಮಾಡಿ, ತವರು ಜಿಲ್ಲೆ ಕಲಬುರ್ಗಿಯಾಗಿದ್ದರೂ ರಾಜ್ಯದ ಎಷ್ಟೋ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿ ಆಯ್ಕೆ ಮಾಡಿಕೊಂಡಿದ್ದಾರೆ.
ರಾಜ್ಯದ ನಾನಾ ಜಿಲ್ಲೆಗಳಿಂದ ಅಭ್ಯರ್ಥಿಗಳ ಆಗಮನ: ಲೈನ್‌ಮ್ಯಾನ್ ಆಗುವ ಕನಸು ನನಸು ಮಾಡಿಕೊಳ್ಳಲು ಇವರ ಕೇಂದ್ರಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಯುವಕ, ಯುವತಿಯರು ಆಗಮಿಸಿದ್ದಾರೆ. ಮೈಸೂರು, ಬೆಂಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಯಚೂರು, ಹಾಸನದಿಂದ ಯುವಕ ಯುವತಿಯರು ತರಬೇತಿಗಾಗಿ ಆಗಮಿಸಿದ್ದು, ಸುಮಾರು 110-120 ಜನರು ತರಬೇತಿ ಪಡೆಯುತ್ತಿದ್ದಾರೆ. ಇದು ರಾಜ್ಯದ ಫಸ್ಟ್ ಬ್ಯಾಚ್ ಆಗಿದೆ. ಈ ತರಬೇತಿಗೆ ಲಿಮಿಟ್ ಇಲ್ಲ. ನಿರಂತರವಾಗಿ ಇರುತ್ತದೆ. ಕಲಿತವರು ಇಲ್ಲಿಂದ ಹೋಗುತ್ತಾರೆ. ಮತ್ತೆ ಹೊಸಬರು ಬಂದು ಸೇರ್ಪಡೆಯಾಗುತ್ತಾರೆ.
ಒಟ್ಟಾರೆ ಈವರೆಗೆ ಇವರಲ್ಲಿ ತರಬೇತಿ ಪಡೆದ ಸುಮಾರು 5 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಿಂದ 30 ಜನರಿಗೆ ಮಾತ್ರ ತರಬೇತಿ ನೀಡಿದ್ದು, ಅವರು ಕೂಡ ನೇಮಕವಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ರೀತಿ ನೇಮಕಾತಿ ಪ್ರಕ್ರಿಯೆ ಇದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ಮೇಲೆ ಆಯ್ಕೆ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಕೇವಲ ಮೆರಿಟ್ ಹಾಗೂ ದೈಹಿಕ ಪರೀಕ್ಷೆ ಮೇಲೆ ನೇಮಕಾತಿ ಇರುವುದರಿಂದ ದೈಹಿಕ ತರಬೇತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಲೈನ್‌ಮ್ಯಾನ್ ಹುದ್ದೆಗಳಿಗೆ ವಿದ್ಯಾರ್ಹತೆ ಏನು? ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಿಂದ ನಡೆಸಲಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರಬೇಕು. ಅದರಲ್ಲಿ ಹೆಚ್ಚು ಅಂಕ ಹಾಗೂ ದೈಹಿಕ ಪರೀಕ್ಷೆ ಮೇಲೆ ನೇಮಕಾತಿ ಮಾಡಲಾಗುತ್ತಿದೆ.
ಲೈನ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳು: ರನ್ನಿಂಗ್, ಸ್ಕಿಪ್ಪಿಂಗ್, ಇಲೆಕ್ಟ್ರಿಕಲ್ ಕಂಬ ಹತ್ತುವುದು, ಹಾಗೂ ರನ್ನಿಂಗ್ ರೇಸ್, ಗುಂಡು ಎಸೆತ, ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳು ಇರುತ್ತವೆ. ಹೀಗಾಗಿ ಈ ತರಬೇತಿ ನೀಡುವುದರಲ್ಲಿ ಕಂಬ ಏರುವುದು, ರನ್ನಿಂಗ್, ಸ್ಕಿಪ್ಪಿಂಗ್ಗೆ ಹೆಚ್ವಿನ ಆದ್ಯತೆ ಮೇಲೆ ತರಬೇತಿ ನೀಡಲಾಗುತ್ತಿದೆ.
ಕಳೆದ 10 ವರ್ಷಗಳಿಂದ ವೆಂಕಟೇಶ್ ಅವರು ಈ ವೃತ್ತಿ ಮಾಡುತ್ತಿದ್ದು, ಕನಿಷ್ಠ ಶುಲ್ಕ ವಿಧಿಸಿದ್ದು, ಮೊದಲು ಉಚಿತವಾಗಿ ತರಬೇತಿ ನೀಡುತ್ತಿದ್ದರು. ಆದರೆ ಯಾರು ಸ್ಪಂದಿಸಲಿಲ್ಲ. ಸರಿಯಾದ ಸಮಯಕ್ಕೆ ತರಬೇತಿಗೆ ಹಾಜರಾಗುತ್ತಿರಲಿಲ್ಲ. ಸರಿಯಾದ ಮರ್ಯಾದೆ ಕೊಡುತ್ತಿರಲಿಲ್ಲ. ಹೀಗಾಗಿ ಶುಲ್ಕ ನಿಗದಿ ಮಾಡಲಾಗಿದ್ದು, ಅವರು "ಕಲಿತಿದ್ದೇನೆ ನಾನು ಹೋಗುತ್ತೇನೆ" ಎನ್ನುವವರೆಗೂ ತರಬೇತಿ ನೀಡುವುದಾಗಿ ತಿಳಿಸಿದ್ದಾರೆ.
ತರಬೇತಿ ಪಡೆಯುತ್ತಿರುವ ದಾವಣಗೆರೆ ಮೂಲದ ವರ್ಷಾ ಪ್ರತಿಕ್ರಿಯೆ ನೀಡಿ, "ಲೈನ್‌ಮ್ಯಾನ್ ಹುದ್ದೆಗೆ ಕಂಬ ಹತ್ತುವುದು ಪ್ರಮುಖವಾದದ್ದು, ನನಗೆ ಕಂಬ ಹತ್ತುವುದು ಹೇಗೆ ಅಂತಾನೇ ಗೊತ್ತಿರಲಿಲ್ಲ. ಯೂಟ್ಯೂಬ್ ಪರಿಶೀಲಿಸಿದಾಗ ಇವರ ನಂಬರ್ ಪಡೆದುಕೊಂಡು ಹುಬ್ಬಳ್ಳಿ ಸೆಂಟರ್ ಗೊತ್ತಾಗಿ ಬಂದಿದ್ದೇನೆ. ಈಗ ನಿಗದಿಪಡಿಸಿದ ಎಲ್ಲಾ ದೈಹಿಕ ತರಬೇತಿ ಪಡೆದುಕೊಂಡಿದ್ದೇವೆ. ಕಂಬ ಹತ್ತುವುದು ಬೇಸಿಕ್ ಎಲ್ಲಾ ಒಂದು ತಿಂಗಳಲ್ಲಿ ಕಲಿತಿದ್ದೇನೆ" ಎಂದರು.
ಕಲಬುರಗಿ ಮೂಲದ ಲಕ್ಷ್ಮಿಪುತ್ರ ಹಾಗೂ ವಿಜಯಪುರದ ವೈಶಾಲಿ ಅವರು ಪ್ರತಿಕ್ರಿಯಿಸಿ, "ಒಂದು ತಿಂಗಳಿಂದ ತರಬೇತಿ ಪಡೆಯುತ್ತಿದ್ದೇನೆ. ನಾನು ದೈಹಿಕವಾಗಿ ಹೆಚ್ಚು ತೂಕ ಇದ್ದೆ. 88 ಕೆಜಿ ಇದ್ದೆ. ಇಲ್ಲಿಗೆ ಬಂದ ಮೇಲೆ ನನ್ನ ತೂಕ ಕೂಡ ಇಳಿದಿದೆ. ದೈಹಿಕವಾಗಿ ಎಷ್ಟೇ ಸಮರ್ಥ ಇದ್ದರೂ ಕಂಬ ಹತ್ತಲು ಆಗುವುದಿಲ್ಲ. ಆದರೆ ವೆಂಕಟೇಶ್ ಸರ್ ಅವರ ಮೆಥೆಡ್ ಹಾಗೂ ಟ್ರಿಕ್ಸ್ ಅನುಸರಿಸಿದರೆ ಎಂಥವರಾದರೂ ಕಂಬವನ್ನು ಹತ್ತಬಹುದು. ಈಗ ಕಂಬವನ್ನು ಹೇಗೆ ಹತ್ತಬೇಕು ಎಂಬ ಬಗ್ಗೆ ಸಂಪೂರ್ಣವಾಗಿ ಕಲಿತುಕೊಂಡಿದ್ದೇನೆ. ತರಬೇತಿ ಪಡೆದಿದ್ದು ತುಂಬ ಖುಷಿ ಇದೆ" ಎಂದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ: ಕಸವನ್ನು ಇಂಧನವಾಗಿ ಪರಿವರ್ತಿಸಲು ಪ್ರಾತ್ಯಕ್ಷಿಕೆ ಮೂಲಕ ತರಬೇತಿ