ಬಾಗಲಕೋಟೆ: ಉತ್ತರ ಕರ್ನಾಟಕ ಪ್ರದೇಶದಲ್ಲಿ ಎಳ್ಳು ಅಮಾವಾಸ್ಯೆ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಸೋಮವಾರ (ಡಿ.30) ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ರೈತಾಪಿ ಜನರು ಹೊಲದಲ್ಲಿ ಭೂಮಿತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲುವ ಮೂಲಕ ಎಳ್ಳು ಅಮಾವಾಸ್ಯೆ ಆಚರಿಸುವ ಪದ್ಧತಿ ಇದೆ. ಇಂದಿನ ಆಧುನಿಕ ಯುಗದ ಭರಾಟೆ ಹಾಗೂ ಫಿಜ್ಜಾ ಬರ್ಗರ್ ಮುಂದೆ ಉತ್ತರ ಕರ್ನಾಟಕ ಖಡಕ್ ರೊಟ್ಟಿ ಚಟ್ನಿ ಸವಿಯುವ ಮಜಾನೇ ಬೇರೆ.
ಹೀಗೆ ಎಲ್ಲರೂ ಒಂದೆಡೆ ಜೋಳದ ಹೊಲದಲ್ಲಿ ಬುತ್ತಿ ಗಂಟು ತೆಗೆದುಕೊಂಡು ಬಂದು ಸೇರಿರುವುದು, ಉತ್ತರ ಕರ್ನಾಟಕ ಶೈಲಿ ಖಡಕ್ ಸಜ್ಜೆ ರೊಟ್ಟಿ, ಚಟ್ನಿ, ಬದನೆಕಾಯಿ ಪಲ್ಲೆ, ಶೇಂಗಾ ಹೋಳಿಗೆ, ಕಡಬು ಸೇರಿದಂತೆ ಇತರ ನಾನಾ ಬಗೆಯ ಅಡುಗೆ ಮಾಡಿಕೊಂಡು ಬಂದು ಬುತ್ತಿಗಂಟು ಬಿಚ್ಚಿ ಪೂಜೆಗೆ ಸಿದ್ಧತೆ ಮಾಡುತ್ತಿರುವ ದೃಶ್ಯ ಕಂಡು ಬಂದಿರುವುದು ಬಾಗಲಕೋಟೆ ಜಿಲ್ಲೆಯ ಗುಳೇಡಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ.
ಎಳ್ಳು ಅಮಾವಾಸ್ಯೆ ವಿಶೇಷ; ಸೋಮವಾರ ಎಳ್ಳು ಅಮವಾಸ್ಯೆ ನಿಮಿತ್ತ ಚಂದ್ರಶೇಖರ ಕಾಳನ್ನವರ ಕುಟುಂಬದವರು ಚರಗ ಚೆಲ್ಲುವ ಆಚರಿಸಿಕೊಂಡು ಬರುವ ಮೂಲಕ ಗಮನ ಸೆಳೆದರು. ಹೊಲದಲ್ಲಿ ಇರುವ ಬನ್ನಿ ಮರಕ್ಕೆ ಪೂಜೆ, ಸಲ್ಲಿಸಿ ನೈವೇದ್ಯ ಮಾಡಿದರು. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಬಳಿಕ, ಇಡೀ ನೈವೇದ್ಯವನ್ನು ಎತ್ತರದಿಂದ ಬೆಳೆದಿರುವ ಜೋಳದ ಹೊಲದ ತುಂಬಾ ಮಹಿಳೆಯರು, ಮಕ್ಕಳು ಸಂಚಾರಿಸುತ್ತಾ, ಹುಲ್ಲು ಹುಲ್ಲುಗ್ಯೊ ಚರಾಗ ಮುರಗ್ಯೊ ಎಂದು ಹೇಳುತ್ತಾ ಭೂ ತಾಯಿಗೆ ನೈವೇದ್ಯ ಸರ್ಮಪಿಸುತ್ತಾರೆ. ಪ್ರತಿ ಹುಲ್ಲು ಕಡ್ಡಿಗೂ ನೈವೇದ್ಯ ಸಮರ್ಪಣೆ ಎಂದು ಹೇಳಿದ ಹಾಗೆ ಎಲ್ಲರೂ ಸಾಮೂಹಿಕ ಉತ್ತರ ಕರ್ನಾಟಕ ಶೈಲಿಯ ಊಟವನ್ನು ಚಪ್ಪರಿಸುತ್ತಾ ಸವಿಯುತ್ತಾರೆ.
ಇಂದಿನ ಆಧುನಿಕ ಯುಗದ ಭರಾಟೆ ಮಧ್ಯೆಯೂ, ಸಂಪ್ರದಾಯ ಪದ್ಧತಿ ನಶಿಸಿ ಹೋಗಬಾರದು ಎಂದು ಚಂದ್ರಶೇಖರ್ ಕಾಳನ್ನವರ ಪ್ರತಿ ವರ್ಷ ಸಾಹಿತಿ, ಜಾನಪದ ವಿದ್ವಾಂಸರು, ಸಂಗೀತ ಕಲಾವಿದರನ್ನು ಕರೆಯಿಸಿ, ಚರಗಾ ಚೆಲ್ಲುತ್ತಾರೆ. ಈ ಬಾರಿ ಚರಗಾ ಚೆಲ್ಲುವ ಆಚರಣೆಯನ್ನು ರುಚಿ ರುಚಿಯಾದ ಊಟದ ಜೊತೆಗೆ ಕಿವಿಗೆ ಇಂಪಾದ ಭೂ ತಾಯಿ ಹಾಡಿನ ಸಂಗೀತದ ರಸದೌತಣ ಉಣಬಡಿಸಿ ವಿಶೇಷವಾಗಿ ಆಚರಿಸಲಾಯಿತು.
ಇದನ್ನೂ ಓದಿ: ಬೆಳಗಾವಿಯಲ್ಲಿ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬಿಗ್ ರೆಸ್ಪಾನ್ಸ್: 4 ದಿನಗಳಲ್ಲಿ 1.3 ಕೋಟಿ ವ್ಯಾಪಾರ..!