ಚಾಮರಾಜನಗರ: ರಾಜ್ಯಸಭೆಯಲ್ಲಿ ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ಜಿಲ್ಲೆಯ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಇಂದು (ಡಿ. 31) ರಂದು ಚಾಮರಾಜನಗರ ಜಿಲ್ಲಾ ಬಂದ್ಗೆ ಕರೆ ನೀಡಿದ್ದು, ಜಿಲ್ಲಾ ಕೇಂದ್ರ ಬಹುತೇಕ ಸ್ತಬ್ಧಗೊಂಡಿದೆ.
ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು ನೇತೃತ್ವದಲ್ಲಿ ದಲಿತ ಸಂಘಟನೆಗಳು, ಅಹಿಂದ, ಬಿಎಸ್ಪಿ, ಎಸ್ಡಿಪಿಐ, ಕನ್ನಡಪರ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಇಂದು ಬೆಳಗ್ಗೆ 8 ರಿಂದಲೇ ಪ್ರತಿಭಟನೆ ಆರಂಭಿಸಿದ್ದು, ಜಿಲ್ಲಾ ಎಲ್ಲಾ ವೃತ್ತಗಳಲ್ಲಿ ಕೆಲ ಕಾಲ ಧರಣಿ ನಡೆಸಿ ಆಕ್ರೋಶ ಹೊರಹಾಕಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನಾಕಾರರು ಶಾಮಿಯಾನ ಹಾಕಲು ಮತ್ತು ಟೈರ್ ಸುಡಲು ಮುಂದಾದರು. ಈ ವೇಳೆ, ಪೊಲೀಸರು ಅಡ್ಡಿಪಡಿಸಿದ್ದರಿಂದ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿಕಾರಿದರು.
ಬಂದ್ ಹಿನ್ನಲೆ ಚಾಮರಾಜನಗರದಲ್ಲಿ ಬಹುತೇಕ ಹೋಟೆಲ್ ಗಳು, ಅಂಗಡಿಗಳು, ವಾಣಿಜ್ಯ ಮಳಿಗೆಗಳನ್ನು ಮುಚ್ಚಲಾಗಿದೆ. ಆದರೆ, ನಗರದಲ್ಲಿ ಸಾರಿಗೆ ಸಂಸ್ಥೆ ಬಸ್ ಗಳು ಸಂಚಾರ ಮಾಡುತ್ತಿದ್ದರಿಂದ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಚಾಲಕರ ಮುಷ್ಕರದ ಸಮಯದಲ್ಲಿ ನಿಮಗೆ ಬೆಂಬಲ ಕೊಟ್ಟಿದ್ದೆವು ಆದರೀಗ, ನೀವು ಇಂದು ನಮ್ಮ ಬಂದ್ಗೆ ಸಹಕಾರ ನೀಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಇದಾದ ಬಳಿಕ, ಅಧಿಕಾರಿಗಳು ತಾತ್ಕಾಲಿಕವಾಗಿ ಸಾರಿಗೆ ಸಂಚಾರ ನಿಲ್ಲಿಸಿದರು.
ಅಮಿತ್ ಶಾ ವಿರುದ್ಧ ಆಕ್ರೋಶ: ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು. ಕೂಡಲೇ ಸಚಿವ ಸ್ಥಾನದಿಂದ ಅಮಿತ್ ಶಾ ಅವರನ್ನು ವಜಾ ಮಾಡಬೇಕು. ಅಮಿತ್ ಶಾ ದೇಶದ ಜನರ ಕ್ಷಮೆ ಕೇಳಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಖಾದಿ ಉತ್ಸವ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬಿಗ್ ರೆಸ್ಪಾನ್ಸ್: 4 ದಿನಗಳಲ್ಲಿ 1.3 ಕೋಟಿ ವ್ಯಾಪಾರ..!