ರಾಯಚೂರು: ಸೇವಾ ನ್ಯೂನತೆ ಎಸೆಗಿದ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳಾದ ಜೊಮ್ಯಾಟೊ ಹಾಗೂ ಡೋಮಿನೋಸ್‌ಗೆ ಜಿಲ್ಲಾ ಗ್ರಾಹಕರ ಆಯೋಗ 40 ಸಾವಿರ ರೂ. ದಂಡ ವಿಧಿಸಿದೆ.
ಪ್ರಕರಣವೇನು?: ನಗರದ ನಿವಾಸಿ ವಕೀಲರಾದ ವಿದ್ಯಾಶ್ರೀ ಎಂಬವರು 2024 ಮಾ.17ರಂದು ಸಂಜೆ 7 ಗಂಟೆಗೆ ಡೋಮಿನೋಸ್ ಪಿಜ್ಜಾಕ್ಕಾಗಿ ಜೊಮ್ಯಾಟೊ ಮೂಲಕ 337.45 ರೂಪಾಯಿ ನೀಡಿ ಆರ್ಡರ್ ಮಾಡಿದ್ದರು. ಆರ್ಡರ್ ಸ್ವೀಕರಿಸಿರುವ ಕುರಿತು ಅವರಿಗೆ ಸ್ವೀಕೃತಿ ಬಂದಿತ್ತು. ಹೀಗಾಗಿ ಪಿಜ್ಜಾಕ್ಕಾಗಿ ವಿದ್ಯಾಶ್ರೀ ಹಾಗೂ ಅವರ ಮಗಳು ರಾತ್ರಿ 9 ಗಂಟೆಯವರೆಗೆ ಕಾದರೂ ಜೊಮ್ಯಾಟೊದಿಂದ ಪಿಜ್ಜಾ ಆರ್ಡರ್ ಬಂದಿರಲಿಲ್ಲ. ಕಾದು ಸುಸ್ತಾಗಿ ಜೊಮ್ಯಾಟೊಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ, ನಿಮ್ಮ ಪಿಜ್ಜಾ ಸಿದ್ಧವಾಗುತ್ತಿದೆ ಎಂಬ ಉತ್ತರ ಬಂದಿದೆ. ಮತ್ತೆ ತಾಯಿ, ಮಗಳು ಕಾದಿದ್ದಾರೆ. ಆದರೂ ಪಿಜ್ಜಾ ಬರಲೇ ಇಲ್ಲ. ಆದರೆ ವಿದ್ಯಾಶ್ರೀ ಮೊಬೈಲ್ಗೆ ಹಣ ಪಾವತಿಸಿರುವ ಮತ್ತು ಪಿಜ್ಜಾ ಸ್ವೀಕರಿಸಿರುವ ಸಂದೇಶ ಬಂದಿದೆ. ಆರ್ಡರ್ ನೀಡದೇ ಈ ಸಂದೇಶವನ್ನೇಕೆ ಕಳುಹಿಸಿದ್ದಾರೆಂದು ಮತ್ತೆ ವಿಚಾರಿಸಿದ್ದಾರೆ. ಆಗ, ನಿಮ್ಮ ಆರ್ಡರ್ ನೀಡಲು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಇದರಿಂದ ಬೇಸತ್ತ ವಿದ್ಯಾಶ್ರೀ, ತಮಗೆ ಎದುರಾದ ಸೇವಾ ನ್ಯೂನತೆಯಿಂದ ಉಂಟಾದ ಮಾನಸಿಕ ವ್ಯಥೆಗೆ ಪರಿಹಾರ ಕೋರಿ ರಾಯಚೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಗ್ರಾಹಕರ ದೂರಿನ ಮೇಲೆ ಪರಿಹಾರ ಆಯೋಗ, ರಾಯಚೂರಿನ ಜೊಮ್ಯಾಟೊ ಹಾಗೂ ಬೆಂಗಳೂರಿನ ಡೋಮಿನೋಸ್ ಕಂಪನಿಗೆ ನೋಟಿಸ್ ರವಾನಿಸಿತ್ತು. ನೋಟೀಸ್ ಸ್ವೀಕರಿಸಿದರೂ ಆಯೋಗದ ಮುಂದೆ ಜೋಮ್ಯಾಟೊ ಮತ್ತು ಡೋಮಿನೋಸ್ನಿಂದ ಯಾರೂ ಹಾಜರಾಗಿರಲಿಲ್ಲ.
ಹೀಗಾಗಿ ಅವರನ್ನು ಎಕ್ಸ್ಪಾರ್ಟಿ ಮಾಡಿ, ದೂರುದಾರೆ ನೀಡಿರುವ ದಾಖಲೆಗಳು, ಸಾಕ್ಷಿಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರ ಕುಮಾರ್ ಹಾಗೂ ಸದಸ್ಯ ಪ್ರಭುದೇವ ಪಾಟೀಲ್ ದೂರುದಾರರಿಗೆ ಉಂಟಾದ ಮಾನಸಿಕ ವ್ಯಥೆ ಹಾಗೂ ಸೇವಾ ನ್ಯೂನತೆಗೆ 40 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಜೊಮ್ಯಾಟೊ ಹಾಗೂ ಡೋಮಿನೋಸ್‌ಗೆ ಆದೇಶಿಸಿದ್ದಾರೆ ಎಂದು ಜಿಲ್ಲಾ ಆಯೋಗದ ಸಹಾಯಕ ರಿಜಿಸ್ಟರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಅಣ್ಣರಾವ್ ಹಾಬಾಳಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನಿಗೆ ಚಾಕು ಇರಿದ ಪ್ರಕರಣ; ಮಾಜಿ ಪ್ರಿಯತಮೆ ಅರೆಸ್ಟ್