ವಾಷಿಂಗ್ಟನ್ ಡಿಸಿ(ಅಮೆರಿಕ): ಬುಧವಾರದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಆದೇಶಕ್ಕೆ ಸಹಿ ಹಾಕಿದ್ದಾರೆ. ದೇಶದಲ್ಲಿ ಇನ್ಮುಂದೆ ಎರಡೇ ಲಿಂಗಗಳಿರುವುದಾಗಿ ಅವರು ಘೋಷಿಸಿದ್ದು, ಈ ಕುರಿತಾಗಿ ಮಹತ್ತರ ರಾಜಕೀಯ ನಿರ್ಣಯ ಕೈಗೊಂಡಿದ್ದಾರೆ. ಟ್ರಾನ್ಸ್ಜೆಂಡರ್ ಗಳು ಅಥವಾ ಲಿಂಗತ್ವ ಅಲ್ಪಸಂಖ್ಯಾತರು ಮಹಿಳಾ ಕ್ರೀಡೆಗಳಲ್ಲಿ ಸ್ಪರ್ಧಿಸುವುದನ್ನು ಟ್ರಂಪ್ ನಿಷೇಧಿಸಿದ್ದಾರೆ.
"Keeping Men Out of Women’s Sports" ಎಂಬ ಆದೇಶಕ್ಕೆ ಟ್ರಂಪ್ ಬುಧವಾರ ಸಹಿ ಹಾಕಿದರು. ಈ ವೇಳೆ ಅಲ್ಲಿ ನೂರಾರು ಮಹಿಳೆಯರು ಮತ್ತು ಅಥ್ಲೆಟಿಕ್ ಸಮವಸ್ತ್ರದಲ್ಲಿ ಕೆಲವು ಯುವತಿಯರು ಅವರನ್ನು ಸುತ್ತುವರೆದಿದ್ದರು. ಸಹಿ ಬಳಿಕ ಟ್ರಂಪ್ ಈ ಕಾರ್ಯಕಾರಿ ಆದೇಶದೊಂದಿಗೆ ಮಹಿಳಾ ಕ್ರೀಡೆ ಮೇಲಿನ ಯುದ್ಧ ಕೊನೆಗೊಂಡಿದೆ ಎಂದು ಹೇಳಿದ್ದಾರೆ.
ಈ ಶೀರ್ಷಿಕೆ IX ಬಗ್ಗೆ ಟ್ರಂಪ್ ಆಡಳಿತದ ಅಧಿಕಾರಿ, "ನೀವು ಮಹಿಳಾ ಕ್ರೀಡೆಗಳನ್ನು ಆಯೋಜಿಸಲು ಬಯಸಿದರೆ, ಅದರಲ್ಲಿ ನೀವು ಮಹಿಳೆಯರಿಗಾಗಿಯೇ ಅವಕಾಶಗಳನ್ನು ಒದಗಿಸಬೇಕಾದರೆ, ಅವರು ಸಮಾನವಾಗಿ ಸುರಕ್ಷಿತ, ಸಮಾನವಾಗಿ ನ್ಯಾಯಯುತ ಮತ್ತು ಸಮಾನವಾಗಿ ಖಾಸಗಿ ಅವಕಾಶಗಳನ್ನು ಹೊಂದಿರಬೇಕು. ಆದ್ದರಿಂದ ನೀವು ಮಹಿಳೆಯರಿಗೆ ಮಹಿಳಾ ಕ್ರೀಡೆಗಳನ್ನು ಸಂರಕ್ಷಿಸಲಿದ್ದೀರಿ ಎಂದರ್ಥ" ಎಂದು ಹೇಳಿದ್ದಾರೆ
ಆದೇಶವು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಇದು ಟೈಟಲ್ IX ನಿಯಮಗಳನ್ನು ಪಾಲಿಸುವಂತೆ ಒತ್ತಾಯಿಸುತ್ತದೆ. ಟೈಟಲ್ IX ಎಂದರೆ ಅಮೆರಿಕದ ಫೆಡರಲ್ ಸರ್ಕಾರದಿಂದ ಹಣಕಾಸಿನ ನೆರವು ಪಡೆಯುವ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸುವ ಕಾನೂನು. ಎರಡನೆಯದಾಗಿ, ಈ ಆದೇಶವು ಖಾಸಗಿ ವಲಯದೊಂದಿಗೆ ಸಹಕರಿಸಲು ಫೆಡರಲ್ ಸರ್ಕಾರವನ್ನು ಪ್ರೋತ್ಸಾಹಿಸುತ್ತದೆ. ಅಂದರೆ, ಸರ್ಕಾರವು ಖಾಸಗಿ ಸಂಸ್ಥೆಗಳೊಂದಿಗೆ ಸೇರಿ ಈ ನಿಯಮಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತದೆ. ಈ ಆದೇಶವು ಲಿಂಗ ತಾರತಮ್ಯವನ್ನು ತಡೆಯಲು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ.
ಮತ್ತೊಂದು ಚುನಾವಣೆ ಭರವಸೆ ಈಡೇರಿಸಿದ ಟ್ರಂಪ್: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಿಂಗ ವೈವಿಧ್ಯತೆ ಕುರಿತು ಅಮೆರಿಕ ಸರ್ಕಾರದ ನೀತಿಗಳನ್ನು ಬದಲಾಯಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಮೆರಿಕವನ್ನುದ್ದೇಶಿಸಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಇನ್ಮುಂದೆ ಅಮೆರಿಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಾಗುತ್ತದೆ. ಇದುವೇ ನಮ್ಮ ಸರ್ಕಾರದ ಅಧಿಕೃತ ನೀತಿಯಾಗಲಿದೆ ಎಂದು ಘೋಷಿಸಿದ್ದರು. ಈ ಮಾತಿನಂತೆ ಅವರು ಇಂದು ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್ಜೆಂಡರ್ಗಳಿಗೆ ಭಾಗವಹಿಸುವ ಅಧಿಕಾರ ಇಲ್ಲ ಎಂಬ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಮಹಿಳಾ ಕ್ರೀಡಾಕೂಟದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸುವುದನ್ನು ರಿಪಬ್ಲಿಕನ್ ಪಕ್ಷದ ಅನೇಕರು ವಿರೋಧಿಸಿದ್ದರು. ಪಕ್ಷದ ಆಶಯದಂತೆ ಅಮೆರಿಕ ಅಧ್ಯಕ್ಷರು ಅಧಿಕೃತವಾಗಿ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮೊದಲ ದಿನವೇ ಚುನಾವಣೆ ಭರವಸೆಗಳನ್ನು ಈಡೇರಿಸಲು ಟ್ರಂಪ್ ಸನ್ನದ್ಧ: 100 ಕಾರ್ಯಾದೇಶಗಳಿಗೆ ಸಹಿ ಹಾಕಲು ಪ್ಲಾನ್