ಬೆಂಗಳೂರು: ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ರದ್ದಾದರೂ, ಆರೋಪಿ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸುಮಾರು 103 ಎಕರೆ ಅರಣ್ಯ ಭೂಮಿಯ ಪೋಡಿಗೆ ಶಿಫಾರಸು ಮಾಡಿದ್ದ ಭೂ ದಾಖಲೆಗಳ ಜಂಟಿ ನಿರ್ದೇಶಕರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಜಂಟಿ ನಿರ್ದೇಶಕ ಇ.ಪ್ರಕಾಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾಯಮೂರ್ತಿ ಕೆ.ನಟರಾಜನ್ ಕೈಗೊಂಡರು.
ಪೋಡಿ ದುರಸ್ತಿಗೆ ಶಿಫಾರಸು ಮಾಡಿರುವ ಬಹುತೇಕ ಅರ್ಜಿಗಳಲ್ಲಿ ಅರ್ಜಿದಾರರು ಸಹಿ ಮಾಡಿರುವುದು ದಾಖಲೆಗಳಿಂದ ಗೊತ್ತಾಗುತ್ತದೆ. ಈ ದಾಖಲೆಗಳು ಕುರಿತು ವಿಚಾರಣೆ ನಡೆಯದೇ ಅವುಗಳ ಸತ್ಯಾಂಶವನ್ನು ಪತ್ತೆ ಹಚ್ಚಲಾಗುವುದಿಲ್ಲ. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅರ್ಜಿದಾರರ ವಿರುದ್ಧ ಇಲಾಖಾ ತನಿಖೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ರದ್ದುಪಡಿಸಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಆದರೆ, ತಾಂತ್ರಿಕ ಕಾರಣಗಳಿಂದ ಕೆಎಟಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ. ಅಲ್ಲದೆ, ಅರ್ಜಿದಾರರು, ಭೂ ದಾಖಲೆಗಳ ಜಂಟಿ ನಿರ್ದೇಶಕರಾಗಿದ್ದು, ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆ 103 ಎಕರೆ ಹೆಚ್ಚುವರಿ ಭೂಮಿಯನ್ನು ಪೋಡಿ ಮಾಡುವುದಕ್ಕೆ ಶಿಫಾರಸು ಮಾಡಿರುವ ಆರೋಪವಿದೆ. ಹೀಗಾಗಿ ಇಲಾಖಾ ತನಿಖೆ ರದ್ದಾಗಿದ್ದರೂ ಪ್ರಕರಣ ರದ್ದುಪಡಿಸಲಾಗದು ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ತುಮಕೂರು ಜಿಲ್ಲೆಯ ಅಂಬಾಪುರ ಗ್ರಾಮದ ಸರ್ವೇ ಸಂಖ್ಯೆ 46ರಲ್ಲಿನ ಒಟ್ಟು 421 ಎಕರೆ 35 ಗುಂಟೆ ಜಮೀನಿತ್ತು. ಅದರಲ್ಲಿ 300 ಎಕರೆಯನ್ನು 1926ರಲ್ಲಿ ಅರಣ್ಯ ಇಲಾಖೆಗೆ ಮಂಜೂರು ಮಾಡಲಾಗಿತ್ತು. ಇನ್ನುಳಿದ 91 ಎಕರೆ ಜಮೀನನ್ನು ತೋಟಗಾರಿಕೆ ಇಲಾಖೆಗೆ ಮಂಜೂರು ಮಾಡಲಾಗಿದ್ದು, 121 ಎಕರೆ ಜಮೀನನ್ನು ಕಂದಾಯ ಇಲಾಖೆಯ ವಶದಲ್ಲಿತ್ತು.
ಕಂದಾಯ ಇಲಾಖೆಗೆ ಸೆರಿದ 121 ಎಕರೆ ಜಮೀನನ್ನು ವಿವಿಧ ವ್ಯಕ್ತಿಗಳ ನಿವೇಶನ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಅರ್ಜಿದಾರ ಅಧಿಕಾರಿ 225 ಎಕರೆಗೆ ಪೋಡಿ ಮಾಡುವುದಕ್ಕೆ ಶಿಫಾರಸು ಮಾಡಿದ್ದರು. ಇದರಿಂದ ಹೆಚ್ಚುವರಿಯಾಗಿ 103 ಎಕರೆ 5 ಗುಂಟೆ ಅರಣ್ಯ ಭೂಮಿಯನ್ನು ಪೋಡಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಪ್ರಕರಣದಲ್ಲಿ ಭೂ ದಾಖಲೆಗಳ ಇಲಾಖೆಯ ಆಯುಕ್ತರ ಕಚೇರಿಯಿಂದ ದೂರು ದಾಖಲಿಸಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು, ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರು ಸೇರಿದಂತೆ ಆರು ಮಂದಿಯ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗಿತ್ತು. ಇಲಾಖೆಯ ಈ ಕ್ರಮವನ್ನು ಕೆಎಟಿ ರದ್ದುಪಡಿಸಿ ಆದೇಶಿಸಿದೆ. ಆದ್ದರಿಂದ ಒಂದೇ ಆರೋಪದ ಮೇಲೆ ಎರಡು ಬಾರಿ ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಕ್ರಿಮಿನಲ್ ಪ್ರಕರಣವ ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದರು.
ಅಲ್ಲದೆ, ಕಂದಾಯ ಇಲಾಖೆಗೆ ಸೇರಿದ್ದ ಜಮೀನಿನಲ್ಲಿ ವಿವಿಧ ವ್ಯಕ್ತಿಗಳಿಗೆ ನಿವೇಶನ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಆದೇಶಿಸಿದೆ. ಹೀಗಾಗಿ ಪೋಡಿಗಾಗಿ ಸಲ್ಲಿಕೆಯಾದ ಅರ್ಜಿಗಳನ್ನು ತಿರಸ್ಕರಿಸುವುದಕ್ಕೆ ಅವಕಾಶವಿರಲಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆದೇಶಕ್ಕಾಗಿ ರವಾನಿಸಿದ್ದರು. ಅರ್ಜಿದಾರ ಯಾವುದೇ ಅಪರಾಧ ಮಾಡಿಲ್ಲ. ಹೀಗಾಗಿ ಕ್ರಿಮಿನಲ್ ಪ್ರಕರಣ ರದ್ದುಮಾಡಬೇಕೆಂದು ಅವರು ಕೋರಿದ್ದರು.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಕಂದಾಯ ಇಲಾಖೆಗೆ ಸೇರಿದ 121 ಎಕರೆ ಮಾತ್ರ ಇದ್ದರೂ 225 ಎಕರೆ ಪೋಡಿಗೆ ಶಿಫಾರಸು ಮಾಡಿ ಹಣಕ್ಕಾಗಿ ಅರಣ್ಯ ಇಲಾಖೆಗೆ ನಷ್ಟ ಉಂಟುಮಾಡಿದ್ದಾರೆ. ಈ ಮೂಲಕ ಸರ್ಕಾರಿ ಜಮೀನು ಖಾಸಗಿಯವರಿಗೆ ಸೇರುವಂತಾಗಿದೆ. ಹೀಗಾಗಿ ಅವರ ವಿರುದ್ಧ ಪ್ರಕರಣ ರದ್ದು ಮಾಡುವುದಕ್ಕೆ ಅವಕಾಶವಿಲ್ಲ. ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, ಪ್ರಕರಣ ರದ್ದುಮಾಡಬಾರದು ಎಂದು ತಿಳಿಸಿದರು.
ಇದನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ಸರ್ವೇ ಕೈಗೊಳ್ಳದ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ - FOREST LAND ENCROACHMENT SURVEY