ನವದೆಹಲಿ: ಇತ್ತೀಚೆಗೆ ಪಿಎಸ್‌ಎಲ್‌ವಿ ಸಿ60 ನೌಕೆಯಲ್ಲಿಟ್ಟು ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಅಲಸಂದೆ ಬೀಜಗಳು ಅಲ್ಲಿ ಮೊಳಕೆಯೊಡೆದಿವೆ. ನೌಕೆಯ ಉಡ್ಡಯನದ ನಾಲ್ಕೇ ದಿನಗಳಲ್ಲಿ ಶೂನ್ಯ ಗುರುತ್ವದಲ್ಲಿ ಉಂಟಾದ ಈ ಬೆಳವಣಿಗೆ ವೈಜ್ಞಾನಿಕ ಲೋಕದ ಕುತೂಹಲ ಕೆರಳಿಸಿದೆ.
ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆ ಕುರಿತು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ (VSSC) ಪ್ರಯೋಗದ ಭಾಗವಾಗಿ ಇಸ್ರೋ, ಒಟ್ಟು 8 ಅಲಸಂದೆ ಬೀಜಗಳನ್ನು ವಿಶೇಷ ವ್ಯವಸ್ಥೆಯೊಂದಿಗೆ ನೌಕೆಯಲ್ಲಿಟ್ಟು ಕಳುಹಿಸಿತ್ತು. ಶೂನ್ಯ ಗುರುತ್ವವಿರುವ ಪ್ರದೇಶದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಅಧ್ಯಯನ ಮಾಡುವುದೇ ಇದರ ಉದ್ದೇಶ.
Life sprouts in space! 🌱 VSSC's CROPS (Compact Research Module for Orbital Plant Studies) experiment onboard PSLV-C60 POEM-4 successfully sprouted cowpea seeds in 4 days. Leaves expected soon. #ISRO #BiologyInSpace pic.twitter.com/QG7LU7LcRR
— ISRO (@isro) January 4, 2025
"ಬಾಹ್ಯಾಕಾಶದಲ್ಲಿ ಚಿಗುರೊಡೆದ ಜೀವ" ಎಂದು ಇಸ್ರೋ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಂತಸ ವ್ಯಕ್ತಪಡಿಸಿದೆ. "ಬಾಹ್ಯಾಕಾಶದಲ್ಲಿ ಸಸ್ಯಗಳ ಅಧ್ಯಯನಕ್ಕಾಗಿ PSLV-C60ನ POEM-4 ಉಪಕರಣದಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ಪ್ರಯೋಗದ ಭಾಗವಾಗಿ ಇಡಲಾಗಿದ್ದ ಅಲಸಂದೆ ಬೀಜ ಉಡ್ಡಯನದ ನಾಲ್ಕು ದಿನಗಳೊಳಗೆ ಚಿಗುರೊಡೆದಿದೆ. ಎಲೆಗಳನ್ನು ನಾವು ಶೀಘ್ರದಲ್ಲೇ ನಿರೀಕ್ಷಿಸುತ್ತಿದ್ದೇವೆ" ಎಂದು ಸಂಸ್ಥೆ ತಿಳಿಸಿದೆ.
ಪಿಎಸ್‌ಎಲ್‌ವಿ ಸಿ60 ನೌಕೆಯು ಎರಡು ಸ್ಪಡೆಕ್ಸ್ ಉಪಗ್ರಹಗಳನ್ನು ಡಿಸೆಂಬರ್ 30ರ ರಾತ್ರಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು. ನೌಕೆಯ ನಾಲ್ಕನೇ ಹಂತದಲ್ಲಿಡಲಾಗಿರುವ POEM-4 ಉಪಕರಣ 350 ಕಿ.ಮೀ ಎತ್ತರದಲ್ಲಿ 24 ಪ್ರಯೋಗಗಳನ್ನು ನಡೆಸಲಿದ್ದು ಮಂಗಳವಾರದಿಂದ ಭೂಮಿಗೆ ಪ್ರದಕ್ಷಿಣೆ ಹಾಕುತ್ತಿದೆ.
ಕಾಂಪ್ಯಾಕ್ಟ್ ರಿಸರ್ಚ್ ಮಾಡ್ಯೂಲ್ ಫಾರ್ ಆರ್ಬಿಟರ್ ಪ್ಲಾಂಟ್ ಸ್ಟಡೀಸ್ (CROPS) ಎಂಬ ಪ್ರಯೋಗವು, ಬಾಹ್ಯಾಕಾಶದ ವಿಭಿನ್ನ ವಾತಾವರಣದಲ್ಲಿ ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ತಿಳಿದುಕೊಳ್ಳುವ ಗುರಿ ಹೊಂದಿದೆ. ಭವಿಷ್ಯದ ಸುದೀರ್ಘ ಬಾಹ್ಯಾಕಾಶ ಯೋಜನೆಗಳಿಗೆ ಇದನ್ನು ತಿಳಿಯುವುದು ಅವಶ್ಯಕವಾಗಿದೆ.
ಬಾಹ್ಯಾಕಾಶದಲ್ಲಿ ಸಸ್ಯವನ್ನು ಬೆಳೆಯುವುದು ಮತ್ತು ಅವುಗಳ ಸುಸ್ಥಿರ ಉಳಿವಿಗೆ ISROದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು CROPS ಅನ್ನು ಬಹುಹಂತದ ಲ್ಯಾಬ್ ಆಗಿ ತಯಾರಿಸಲಾಗಿದೆ. ನೌಕೆಯಲ್ಲಿ ಇದನ್ನು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಾಗಿ ರೂಪುಗೊಳಿಸಲಾಗಿದೆ. ಶೂನ್ಯ ಗುರುತ್ವದ ಪರಿಸರದಲ್ಲಿ ಬೀಜ ಮೊಳಕೆಯೊಡೆಯುವುದು ಮತ್ತು ಅದು ಎರಡು ಎಲೆಗಳ ಹಂತ ತಲುಪುವವರೆಗೆ ಸೂಕ್ತ ಪೋಷಣೆ ಮಾಡುವ ನಿಟ್ಟಿನಲ್ಲಿ 5ರಿಂದ 7 ದಿನಗಳ ಪ್ರಯೋಗ ಮಾಡಲು ಇಸ್ರೋ ಯೋಜಿಸಿದೆ.
ಮಹತ್ವದ ಅಂಶಗಳು:
- ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆಯ ಕುರಿತು ಅಧ್ಯಯನ
- ಭವಿಷ್ಯದ ದೀರ್ಘಾವಧಿಯ ಬಾಹ್ಯಾಕಾಶ ಯಾತ್ರೆಗಳಿಗೆ ನೆರವು
- ವಿಜ್ಞಾನಿಗಳಿಗೆ ಅಂತರಿಕ್ಷದಲ್ಲೇ ಪೌಷ್ಟಿಕಾಂಶಯುಕ್ತ ಆಹಾರ ಸಿದ್ಧ
- ಗುರುತ್ವ ಬಲವಿಲ್ಲದೆ ಸಸ್ಯಗಳ ಬೆಳವಣಿಗೆಯ ಕುರಿತು ಸಂಶೋಧನೆ
- ಇಸ್ರೋ ಭವಿಷ್ಯದ ಮಹತ್ವದ ಯೋಜನೆಗಳಾದ ಗಗನಯಾನ, ಸ್ಪೇಸ್ ಸ್ಟೇಷನ್ ನಿರ್ಮಾಣಕ್ಕೆ ಸಹಕಾರಿ
ಇದನ್ನೂ ಓದಿ: ಬಾಹ್ಯಾಕಾಶ ಡಾಕಿಂಗ್ ಪ್ರಯೋಗ: ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ, ಯಶಸ್ವಿಯಾಗಿ ಬೇರ್ಪಡಿಸಿದ ಇಸ್ರೋ
ಅಲಸಂದೆ ಬೀಜಗಳನ್ನು ನೌಕೆಯೊಳಗೆ ಸಕ್ರಿಯ ಉಷ್ಣಾಂಶ ನಿಯಂತ್ರಣದೊಂದಿಗೆ ಮುಚ್ಚಿದ ಪೆಟ್ಟಿಗೆಯ ಪರಿಸರದಲ್ಲಿ ಇರಿಸಲಾಗಿದೆ. ಇದರಲ್ಲಿ ಕ್ಯಾಮೆರಾ ಇಮೇಜಿಂಗ್, ಆಮ್ಲಜನಕ, ಇಂಗಾಲದ ಡೈಆಕ್ಸೈಡ್‌ನ ಸಾಂದ್ರತೆಗಳು, ಸಾಪೇಕ್ಷ ಆರ್ದ್ರತೆ, ತಾಪಮಾನ, ಮಣ್ಣಿನ ತೇವಾಂಶದ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆ ಇದ್ದು, ಸಸ್ಯದ ಬೆಳವಣಿಗೆ ಮತ್ತು ಅದರ ಮೇಲ್ವಿಚಾರಣೆಗೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಇಸ್ರೋ ಹೇಳಿದೆ.
SPADEX chaser captures an in-orbit space selfie video!
— ISRO (@isro) January 4, 2025
#ISRO #SpaceTech pic.twitter.com/5oCdmRLtTi
ಇಸ್ರೋ ಸ್ಪೇಸ್ ಡಾಕಿಂಗ್ ಪ್ರಯೋಗ: ಇದರ ಜೊತೆಗೆ, ತನ್ನ ಸ್ಪೇಸ್ ಡಾಕಿಂಗ್ ಪ್ರಯೋಗದ ಭಾಗವಾಗಿ ಭೂಮಿಯಿಂದ 470 ಕಿಲೋ ಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಸುತ್ತುತ್ತಿರುವ ಚೇಸರ್ ಸ್ಯಾಟಲೈಟ್‌ನ ಸೆಲ್ಫಿ ವಿಡಿಯೋವನ್ನು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಈ ಉಪಗ್ರಹ ನಿಗದಿತ ಗುರಿಯಲ್ಲಿರುವ ಉಪಗ್ರಹದೊಂದಿದೆ ಮಂಗಳವಾಗ ಡಾಕಿಂಗ್ ಪ್ರಕ್ರಿಯೆ ನಡೆಸುವ ನಿರೀಕ್ಷೆ ಇದೆ. ಇದು ಯಶಸ್ವಿಯಾದರೆ ಭಾರತ ಇಂಥದ್ದೊಂದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಜಗತ್ತಿನ ನಾಲ್ಕನೇ ದೇಶವಾಗಲಿದೆ. ರಷ್ಯಾ, ಅಮೆರಿಕ ಮತ್ತು ಚೀನಾ ದೇಶಗಳು ಈ ತಂತ್ರಜ್ಞಾನವನ್ನು ಹೊಂದಿವೆ.
ಇದನ್ನೂ ಓದಿ: ಸಂಪೂರ್ಣವಾಗಿ ಭಾರತದಲ್ಲೇ ರೆಡಿಯಾಯ್ತು ಕಾರು : ಮರಳುಗಾಡು, ಗುಡ್ಡಗಾಡು, 2 ಅಡಿ ಗುಂಡಿಯೇ ಇರಲಿ ಓಡುತ್ತೆ!; ಏನಿದು 'ಅಶ್ವ-4*4'?