ದಾಂತೇವಾಡ(ಛತ್ತೀಸ್‌ಗಢ): ಇಲ್ಲಿನ ಬಸ್ತಾರ್ ವಲಯದಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ಪಡೆಯ(ಡಿಆರ್‌ಜಿ)ಯ ಓರ್ವ ಹೆಡ್ ಕಾನ್ಸ್‌ಟೇಬಲ್ ಕೂಡಾ ಮೃತಪಟ್ಟಿದ್ದಾರೆ.
ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಶನಿವಾರ ಸಂಜೆ ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆ ಕೈಗೊಂಡಿದ್ದವು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ರಾತ್ರಿ ಗುಂಡಿನ ದಾಳಿ ಮುಗಿದ ನಂತರ ನಾಲ್ವರು ನಕ್ಸಲರ ಮೃತದೇಹಗಳನ್ನು ವಶಕ್ಕೆ ಪಡೆಯಲಾಯಿತು. ಇದರ ಜೊತೆಗೆ ಎಕೆ 47 ರೈಫಲ್, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಸ್ವಯಂ ಲೋಡಿಂಗ್ ರೈಫಲ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ನಕ್ಸಲರ ಗುಂಡಿನ ದಾಳಿಯಲ್ಲಿ ಡಿಆರ್‌ಜಿ ಹೆಡ್ ಕಾನ್ಸ್‌ಟೇಬಲ್ ಸನ್ನು ಕರಮ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸ್ಕಿಡ್ ಆಗಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ: ನಾಲ್ವರು ಯೋಧರು ಹುತಾತ್ಮ, ಒಬ್ಬ ಸೈನಿಕನಿಗೆ ಗಂಭೀರ ಗಾಯ