ವಿಂಬಲ್ಡನ್(ಇಂಗ್ಲೆಂಡ್):ಟಿ-20 ವಿಶ್ವಕಪ್ ಕ್ರಿಕೆಟ್ ಮುಗಿದ ಬೆನ್ನಲ್ಲೇ, ಇಂದಿನಿಂದ (ಸೋಮವಾರ) ವಿಂಬಲ್ಡನ್ ಟೆನಿಸ್ ಆರಂಭವಾಗುತ್ತಿದೆ. ಗಾಯಗೊಂಡು ಚೇತರಿಸಿಕೊಂಡಿರುವ 24 ಗ್ರ್ಯಾನ್ಸ್ಲಾಮ್ ಪ್ರಶಸ್ತಿ ವಿಜೇತ ನೊವಾಕ್ ಜೊಕೊವಿಕ್ ಗ್ರಾಸ್ಕೋರ್ಟ್ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಯಲ್ಲಿ ಭಾಗವಹಿಸಿದರೆ, ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್ನ ಆ್ಯಂಡಿ ಮರ್ರೆ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಈಚೆಗೆ ಮುಗಿದ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಮತ್ತು ವಿಂಬಲ್ಡನ್ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಜ್ ಮತ್ತೊಂದು ಗ್ರ್ಯಾನ್ಸ್ಲಾಮ್ ಮೇಲೆ ಕಣ್ಣಿಟ್ಟಿದ್ದಾರೆ. ಎಟಿಪಿ ಟೆನಿಸ್ನಲ್ಲಿ ಅಗ್ರ ಶ್ರೇಯಾಂಕದಲ್ಲಿರುವ ಜನ್ನಿಕ್ ಸಿನ್ನರ್, ಜೊಕೊವಿಕ್ ಅವರು ಅಲ್ಕರಜ್ಗೆ ಸವಾಲಾಗುವ ನಿರೀಕ್ಷೆ ಇದೆ.
ಮಹಿಳಾ ವಿಭಾಗದಲ್ಲಿ ನಂ.1 ಶ್ರೇಯಾಂಕದ ಇಗಾ ಸ್ವಿಯಾಟೆಕ್, ನಂ.2 ಶ್ರೇಯಾಂಕದ ಕೊಕೊ ಗೌಫ್, 3ನೇ ಶ್ರೇಯಾಂಕದ ವಿಕ್ಟೋರಿಯಾ ಸಬಲೆಂಕಾ, 2022 ವಿಂಬಲ್ಡನ್ ಚಾಂಪಿಯನ್ ಎಲೆನಾ ರೈಬಕೆನಾ ಅವರು ಕಣಕ್ಕಿಳಿಯಲಿದ್ದಾರೆ. ಹುಲ್ಲುಹಾಸಿನ ಕೋರ್ಟ್ಗಳಲ್ಲಿ ಮಹಿಳೆಯರು ಮೂರು ಸೆಟ್ನ ಪಂದ್ಯಗಳನ್ನು ಆಡಿದರೆ, ಪುರುಷರು 5 ಸೆಟ್‌ಗಳ ಪಂದ್ಯಗಳನ್ನು ಆಡಲಿದ್ದಾರೆ. ಪಂದ್ಯಾವಳಿ 14 ದಿನಗಳ ಕಾಲ ನಡೆಯಿದೆ. ಮಹಿಳೆಯರಲ್ಲಿ ಇಗಾ ಸ್ವಿಯಾಟೆಕ್, ಪುರುಷರಲ್ಲಿ ಜನ್ನಿಕ್ ಸಿನ್ನರ್ ಟೂರ್ನಿಯ ಆರಂಭಕ್ಕೂ ಮುನ್ನ ಅಗ್ರ ಶ್ರೇಯಾಂಕ ಹೊಂದಿದ್ದಾರೆ.
ಯಾವಾಗ ಫೈನಲ್?:ಜುಲೈ 1,2 ರಂದು ಮೊದಲ ಸುತ್ತಿನ ಪಂದ್ಯಗಳು, ಜುಲೈ 3, 4 ರಂದು ಎರಡನೇ ಸುತ್ತು, ಜುಲೈ 5, 6 ರಂದು ಮೂರನೇ ಸುತ್ತು, ಜುಲೈ 7, 8 ರಂದು ನಾಲ್ಕನೇ ಸುತ್ತು, ಜುಲೈ 9, 10 ರಂದು ಕ್ವಾರ್ಟರ್‌ಫೈನಲ್ ಪಂದ್ಯಗಳು, ಜುಲೈ 11 ರಂದು ಮಹಿಳೆಯರ ಸೆಮಿಫೈನಲ್, ಜುಲೈ 12 ರಂದು ಪುರುಷರ ಸೆಮಿಫೈನಲ್, ಜುಲೈ 13 ರಂದು ಮಹಿಳೆಯರ ಫೈನಲ್ ನಡೆದರೆ, ಜುಲೈ 14 ರಂದು ಪುರುಷರ ಫೈನಲ್ ನಡೆಯಲಿದೆ.