Rohit Sharma: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಲಯಕ್ಕೆ ಮರಳಿದ್ದು ಸ್ಫೋಟಕ ಬ್ಯಾಟಿಂಗ್ ಮೂಲಕ ಆಂಗ್ಲ ಪಡೆಯ ಬೌಲರ್ಗಳನ್ನು ಚೆಂಡಾಡಿದ್ದಾರೆ.
ಕಟಕ್ನ ಬಾರಾಬತಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಭರ್ಜರಿ ಪ್ರದರ್ಶನ ನೀಡಿ 304 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿರುವ ಭಾರತದ ಪರ ರೋಹಿತ್ ಶರ್ಮಾ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ರೋಹಿತ್ ರೌದ್ರಾವತಾರ : ಈ ಪಂದ್ಯದ ಮೂಲಕ ಮತ್ತೆ ಲಯಕ್ಕೆ ಮರಳಿರುವ ಹಿಟ್ಮ್ಯಾನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಂಗ್ಲರನ್ನು ಕಾಡಿದ್ದಾರೆ. ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಹಿಟ್ಮ್ಯಾನ್, ವೇಗವಾಗಿ ಶತಕವನ್ನೂ ಪೂರ್ಣಗಳಿಸಿದ್ದಾರೆ. ಇಂಗ್ಲೆಂಡ್ ಬೌಲರ್ಗಳನ್ನು ಬೆಂಡೆತ್ತಿರುವ ರೋಹಿತ್ 76 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 10 ಬೌಂಡರಿ ಸಮೇತ ಶತಕ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಕ್ರಿಸ್ ಗೇಲ್ ದಾಖಲೆ ಬ್ರೇಕ್ : ಈ ಪಂದ್ಯದಲ್ಲಿ 7 ಸಿಕ್ಸರ್ ಸಿಡಿಸಿರುವ ರೋಹಿತ್ ಶರ್ಮಾ ಏಕದಿನ ಸ್ವರೂಪದಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟರ್ ಆಗಿ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ. ಸದ್ಯ ರೋಹಿತ್ ಶರ್ಮಾ 337 ಸಿಕ್ಸರ್ ಸಿಡಿಸಿದ್ದಾರೆ. ಗೇಲ್ ಏಕದಿನದಲ್ಲಿ ಒಟ್ಟು 331 ಸಿಕ್ಸರ್ ಬಾರಿಸಿದ್ದರು. ಆದರೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಶಾಹೀದ್ ಆಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ ಅವರು 351 ಸಿಕ್ಸರ್ ಸಿಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್ : ಇದೇ ಪಂದ್ಯದಲ್ಲಿ ಹಿಟ್ಮ್ಯಾನ್, ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಮುರಿದಿದ್ದಾರೆ. ಆರಂಭಿಕ ಬ್ಯಾಟರ್ ಆಗಿ ಎಲ್ಲಾ ಸ್ವರೂಪದ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಆಗಿ ದಾಖಲೆ ಬರೆದಿದ್ದಾರೆ. ರೋಹಿತ್ 343 ಪಂದ್ಯಗಳನ್ನು ಆಡಿ 45.22 ಸರಾಸರಿಯಲ್ಲಿ 15,402 ರನ್ ಗಳಿಸಿ, ಸಚಿನ್ ಅವರ ದಾಖಲೆ ಮುರಿದಿದ್ದಾರೆ. ತೆಂಡೂಲ್ಕರ್ 346 ಪಂದ್ಯಗಳಲ್ಲಿ 48.07 ಸರಾಸರಿಯಲ್ಲಿ 15,335 ರನ್ ಗಳಿಸಿದ್ದರು.
ದ್ರಾವಿಡ್ ಹಿಂದಿಕ್ಕಿದ ಹಿಟ್ಮ್ಯಾನ್ : ರೋಹಿತ್ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು. ಇದೀಗ ಏಕದಿನ ಪಂದ್ಯಗಳಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು.
ಸದ್ಯ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಕ್ರಮವಾಗಿ ಮೂರು ಸ್ಥಾನಗಳಲ್ಲಿದ್ದು ಅವರ ನಂತರ ಹಿಟ್ಮ್ಯಾನ್ ಕಾಣಿಸಿಕೊಂಡಿದ್ದಾರೆ. ಎರಡನೇ ಪಂದ್ಯಕ್ಕೂ ಮುನ್ನ ರೋಹಿತ್ ಏಕದಿನ ಪಂದ್ಯಗಳಲ್ಲಿ 10,868 ರನ್ ಗಳಿಸಿದ್ದರು. ಪಂದ್ಯದಲ್ಲಿ 22 ರನ್ ಕಲೆ ಹಾಕುತ್ತಿದ್ದಂತೆ ದ್ರಾವಿಡ್ ಅವರನ್ನು ಹಿಂದಿಕ್ಕಿದರು.
ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಬ್ಯಾಟರ್ಗಳು
18426 - ಸಚಿನ್ ತೆಂಡೂಲ್ಕರ್
13906 - ವಿರಾಟ್ ಕೊಹ್ಲಿ
11363 - ಸೌರವ್ ಗಂಗೂಲಿ
10,987 - ರೋಹಿತ್ ಶರ್ಮಾ
10889 - ರಾಹುಲ್ ದ್ರಾವಿಡ್