IND vs ENG 2nd ODI: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಇಂದು ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಒಡಿಶಾದ ಬಾರಾಬತಿ ಮೈದಾನದಲ್ಲಿ ಉಭಯ ತಂಡಗಳು ಸೆಣಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಏತನ್ಮಧ್ಯೆ, ಗಾಯದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಆಡುತ್ತಿದ್ದಾರೆ.
5 ತಿಂಗಳ ಬಳಿಕ ಕೊಹ್ಲಿ ಕಮ್ಬ್ಯಾಕ್ : ವಿರಾಟ್ ಕೊಹ್ಲಿ 5 ತಿಂಗಳ ಬಳಿಕ ಏಕದಿನ ಪಂದ್ಯಕ್ಕೆ ಮರಳಿದ್ದಾರೆ. 2024ರಲ್ಲಿ ಆಗಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಸರಣಿಯಲ್ಲಿ ಕೊಹ್ಲಿ ಆಡಿದ್ದರು. ಇದಾದ ಬಳಿಕ ಭಾರತ ಯಾವುದೇ ಏಕದಿನ ಸರಣಿ ಆಡಿರಲಿಲ್ಲ.
ವಿಶ್ವದಾಖಲೆ ಬರೆಯಲು ಕೊಹ್ಲಿ ಸಜ್ಜು : ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈವರೆಗೆ 283 ಪಂದ್ಯಗಳಲ್ಲಿ 13,906 ರನ್ ಗಳಿಸಿರುವ ಕೊಹ್ಲಿ ಏಕದಿನ ಸ್ವರೂಪದಲ್ಲಿ 14000 ರನ್ ಪೂರ್ಣಗೊಳಿಸಲು ಅವರಿಗೆ 94 ರನ್ ಬೇಕಿದೆ. ಈ ಪಂದ್ಯದಲ್ಲಿ ಇದು ಸಾಧ್ಯವಾದರೆ ಅತೀ ಕಡಿಮೆ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಒಟ್ಟಾರೆ ವಿಶ್ವದ 3ನೇ ಬ್ಯಾಟರ್ ಆಗಲಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಸಂಗಕ್ಕಾರ ಏಕದಿನ ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ತೆಂಡೂಲ್ಕರ್ 350 ಇನ್ನಿಂಗ್ಸ್ ತೆಗೆದುಕೊಂಡರೆ, ಸಂಗಕ್ಕಾರ ಈ ಸಾಧನೆ ಮಾಡಲು 378 ಇನ್ನಿಂಗ್ಸ್ ತೆಗದುಕೊಂಡಿದ್ದಾರೆ.
ಜೈಸ್ವಾಲ್ ಹೊರಕ್ಕೆ : ಮೊದಲ ಪಂದ್ಯ ಆಡಿದ್ದ ಯಶಸ್ವಿ ಜೈಸ್ವಾಲ್ ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊದಲ ಪಂದ್ಯಕ್ಕೆ ಕೊಹ್ಲಿ ಅಲಭ್ಯರಾಗಿದ್ದ ಕಾರಣ ವಿರಾಟ್ ಕೊಹ್ಲಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಶ್ರೇಯಸ್ ಅಯ್ಯರ್ ತಂಡ ಸೇರಿಕೊಂಡಿದ್ದರು. ಸಿಕ್ಕ ಅವಕಾಶ ಸದುಪಯೋಗ ಪಡೆಸಿಕೊಂಡ ಅಯ್ಯರ್ ಆಂಗ್ಲರ ವಿರುದ್ಧ ಅರ್ಧಶತಕ ಬಾರಿಸಿದರು. ಆದರೆ ಓಪನರ್ ಆಗಿ ಬಂದಿದ್ದ ಜೈಸ್ವಾಲ್ ಸಿಂಗಲ್ ಡಿಜಿಟ್ಗೆ ಪೆವಿಲಿಯನ್ ಸೇರಿದ್ದರು.
ತಂಡಗಳು-ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಇಂಗ್ಲೆಂಡ್ : ಜೋಸ್ ಬಟ್ಲರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಶಾಕಿಬ್ ಮಹಮೂದ್, ಮಾರ್ಕ್ ವುಡ್.
ಇದನ್ನೂ ಓದಿ: ರೋಹಿತ್ ಅಭ್ಯಾಸ ನಿಲ್ಲಿಸು, ಮೊದಲು ಆ ಕೆಲಸ ಮಾಡು: ಮಾಜಿ ಕೋಚ್ ಹೀಗಂದಿದ್ದೇಕೆ?