ಲಖನೌ:ಯುವ ವೇಗಿ ಯಶ್ ಠಾಕೂರ್ ಬಿರುಗಾಳಿ ಬೌಲಿಂಗ್, ಆಲ್ರೌಂಡರ್ ಮಾರ್ಕಸ್ ಸ್ಟೊಯಿನೀಸ್ ಅವರ ಅರ್ಧಶತಕದ ಬಲದಿಂದ ಗುಜರಾತ್ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ 33 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಸತತ ಮೂರು ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ.
ಏಕನಾ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ಆರಂಭಿಕ ವೈಫಲ್ಯದಿಂದಾಗಿ 5 ವಿಕೆಟ್ಗೆ 163 ರನ್ ಗಳಿಸಿತು. ಈಗಿನ ಟಿ20 ಕ್ರಿಕೆಟ್ನಲ್ಲಿ ದೊಡ್ಡ ಮೊತ್ತವಲ್ಲದ ಗುರಿಯನ್ನು ಬೆನ್ನತ್ತಿದ ಗುಜರಾತ್ ಉತ್ತಮ ಆರಂಭ ಕಂಡರೂ ನಂತರ ಕುಸಿದು ಸೋಲಿನ ಸುಳಿಗೆ ಸಿಲುಕಿತು.
'ಯಶ' ಕಂಡ ಪಾಂಡ್ಯ:ಗುಜರಾತ್ ಪರವಾಗಿ ಆರಂಭಿಕರಾದ ಸಾಯಿ ಸುದರ್ಶನ್ 31, ನಾಯಕ ಶುಭ್ಮನ್ ಗಿಲ್ 19, ರಾಹುಲ್ ತೆವಾಟಿಯಾ 30, ವಿಜಯ್ ಶಂಕರ್ 17 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳು ವೈಫಲ್ಯ ಕಂಡರು. ಯಶ್ ಠಾಕೂರ್ ಮತ್ತು ಕೃನಾಲ್ ಪಾಂಡ್ಯ ಮಾರಕ ದಾಳಿಗೆ ಸಿಲುಕಿದ ಗಿಲ್ ಪಡೆ ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. 18.5 ಓವರ್ಗಳಲ್ಲಿ 130 ರನ್ಗೆ ಆಲೌಟ್ ಆಗುವ ಮೂಲಕ ಸತತ ಎರಡನೇ ಸೋಲು ಕಂಡಿತು.
3.5 ಓವರ್ ಎಸೆದ ಯಶ್ ಠಾಕೂರ್ 30 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು. ಇದು ಟೂರ್ನಿಯಲ್ಲಿ ದಾಖಲಾದ ಮೊದಲ 5 ವಿಕೆಟ್ ಆಗಿದೆ. ಬಿಗುವಿನ ದಾಳಿ ಮಾಡಿದ ಸ್ಪಿನ್ನರ್ ಕೃನಾಲ್ ಪಾಂಡ್ಯ ತಮ್ಮ ಪಾಲಿನ 4 ಓವರ್ನಲ್ಲಿ 11 ರನ್ ನೀಡಿ 3 ವಿಕೆಟ್ ಪಡೆದು ಗುಜರಾತ್ಗೆ ಮಾರಕವಾದರು. ನವೀನ್ ಉಲ್ ಹಕ್, ರವಿ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.
ಸ್ಟೊಯಿನೀಸ್ ಅರ್ಧಶತಕ:ಇದಕ್ಕೂ ಮೊದಲು ಬ್ಯಾಟ್ ಮಾಡಿದ ಲಖನೌಗೆ ಮಾರ್ಕಸ್ ಸ್ಟೊಯಿನೀಸ್ ನೆರವಾದರು. 18 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕಣಕ್ಕಿಳಿದ ಆಸ್ಟ್ರೇಲಿಯನ್ ಆಲ್ರೌಂಡರ್ ಭರ್ಜರಿ ಅರ್ಧಶತಕ ದಾಖಲಿಸಿದರು. 43 ಎಸೆತಗಳಲ್ಲಿ 58 ರನ್ ಗಳಿಸಿದ ಅವರ ಇನಿಂಗ್ಸ್ನಲ್ಲಿ 4 ಬೌಂಡರಿ, 2 ಸಿಕ್ಸರ್ಗಳು ಇದ್ದವು. ಇತ್ತ ವಿಕೆಟ್ ಬಿದ್ದ ಬಳಿಕ ನಿಧಾನಗತಿಯಲ್ಲಿ ಇನಿಂಗ್ಸ್ ಕಟ್ಟಿದ ನಾಯಕ ಕೆಎಲ್ ರಾಹುಲ್ 31 ಎಸೆತಗಳಲ್ಲಿ 33 ರನ್ ಮಾಡಿದರು. ಕೊನೆಯಲ್ಲಿ ಮಿಂಚಿದ ಪೂನರ್ 32, ಆಯುಷ್ ಬದೌನಿ 20 ರನ್ ಗಳಿಸಿದರು. ಗುಜರಾತ್ ಪರವಾಗಿ ಉಮೇಶ್ ಯಾದವ್ ದರ್ಶನ್ ನಲ್ಕಂಡೆ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ:IPL: ಸ್ಟೋಯ್ನಿಸ್ ಫಿಫ್ಟಿ; ಗುಜರಾತ್ಗೆ 164 ರನ್ ಟಾರ್ಗೆಟ್ ಕೊಟ್ಟ ರಾಹುಲ್ ಬಳಗ - LSG vs GT