ಹಾವೇರಿ: ಹಳೆಯ ಬ್ಯಾಲೆಟ್ ಬಾಕ್ಸ್ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಮತ್ತು ಬ್ಯಾಲೆಟ್ ಬಾಕ್ಸ್ ಖರೀದಿಸಿದ್ದ ಗುಜರಿ ವ್ಯಪಾರಿವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ ಮಾಳಗಿ, ಗಣೇಶ ಹರಿಜನ, ಮುತ್ತಪ್ಪ ದೇವಿಹೊಸೂರು, ಕೃಷ್ಣ ಹರಿಜನ, ಮೊಹಮ್ಮದ್ ಜಾವಿದ್ ಮಕಾನದಾರ ಬಂಧಿತರು.
ಬಂಧಿತರೆಲ್ಲರೂ ಹಾವೇರಿಯ ಸುಭಾಷ್ ನಗರ, ಪುರದ ಓಣಿ, ಗುತ್ತಲ ಮತ್ತು ಯತ್ತಿನಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಆಟೋ ಹಾಗೂ 27 ಬ್ಯಾಲೆಟ್ ಬಾಕ್ಸ್ಗಳನ್ನು ಹಾವೇರಿಯ ಶಹರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಲುವೆಯಲ್ಲಿ ಪತ್ತೆಯಾಗಿದ್ದ ಬ್ಯಾಲೆಟ್ ಬಾಕ್ಸ್: ಯತ್ತಿನಹಳ್ಳಿ ಗ್ರಾಮದ ಬಳಿಯ ಲೇಔಟ್ವೊಂದರ ಕಾಲುವೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಬಳಸಲಾಗುತ್ತಿದ್ದ ನಿರುಪಯುಕ್ತ 10 ಬ್ಯಾಲೆಟ್ ಬಾಕ್ಸ್ಗಳು ಮೂರು ದಿನಗಳ ಹಿಂದೆ ಪತ್ತೆಯಾಗಿದ್ದವು. ನಗರದ ಎಪಿಎಂಸಿಯಲ್ಲಿರುವ ಒಂದು ಹಳೆ ಗೋದಾಮಿನಲ್ಲಿ ಇಡಲಾಗಿದ್ದ ಹಳೆಯ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್ಗಳು ಇವಾಗಿದ್ದವು. ಕಂದಾಯ ಇಲಾಖೆಯವರು ಹಲವು ವರ್ಷಗಳ ಹಿಂದೆ ಇಲ್ಲಿಗೆ ಬ್ಯಾಲೆಟ್ ಬಾಕ್ಸ್ಗಳನ್ನು ತಂದಿಟ್ಟಿದ್ದರು. ಬಾಕ್ಸ್ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಹೋಗುವಾಗ ಸಾಗಿಸಲಾಗದೇ ಲೇಔಟ್ನ ಕಾಲುವೆಯಲ್ಲಿ ಬಿಟ್ಟುಹೋಗಿದ್ದರು. ಬ್ಯಾಲೆಟ್ ಬಾಕ್ಸ್ ಕಳ್ಳತನವಾಗಿದ್ದು ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: ಕಾರಿಗೆ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್: ಕೊಲೆಯಲ್ಲ, ಆತ್ಮಹತ್ಯೆ!