ಧಾರವಾಡ: ಶನಿವಾರ (ಫೆ. 8) ಹಾಡಹಗಲೇ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಶೋಕ್ ಹೊಸಮನಿ, ಶಿವಕುಮಾರ್ ಕೋಕಾಟಿ, ಶಿವಾನಂದ ಕರಡಿಗುಡ್ಡ ಬಂಧಿತರು. ಆರೋಪಿಗಳಿಂದ ಮೂರು ಬೈಕ್ ಹಾಗೂ ಚಿನ್ನಾಭರಣ, ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಧಾರವಾಡ ಮಾಳಮಡ್ಡಿ ಬಡಾವಣೆಯಲ್ಲಿ ನಿನ್ನೆ ಡಾ. ಆನಂದ ಕಬ್ಬೂರ ಅವರು ಮನೆಯಲ್ಲಿಲ್ಲದ ವೇಳೆ ಕಳ್ಳರು ಅವರ ಪತ್ನಿ ವಿನೋದಿನಿ ಅವರು ಒಬ್ಬರೇ ಇದ್ದು, ಅವರ ಮೇಲೆ ಹಲ್ಲೆ ಮಾಡಿ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದರು. ಪ್ರಕರಣ ನಡೆದ ಕೇವಲ ಐದು ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
"ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿಗಳ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಸಿಸಿಟಿವಿಯ ಸಹಾಯದಿಂದ ಮೂರು ಜನರನ್ನು ರಾಯಾಪುರದಲ್ಲಿ ಬಂಧಿಸಿದ್ದಾರೆ. ಬಂಧನದ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ ಕಳ್ಳತನವನ್ನು ಇದೇ ಕಳ್ಳರು ಮಾಡಿದ್ದು" ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
"ಬೆಳಗಾವಿ ಪಾಸಿಂಗ್ ಇರುವ ಒಂದೇ ನಂಬರ್ನ ಬೈಕ್ಗಳನ್ನು ಕಳ್ಳತನಕ್ಕೆ ಇವರು ಬಳಸುತ್ತಿದ್ದರು. ಒಂದು ಆಟೋ ಕೂಡಾ ವಶಕ್ಕೆ ಪಡೆದುಕೊಂಡಿದ್ದು, ವಯಸ್ಸಾದ ಮಹಿಳೆಯರ ಮನೆಯನ್ನೇ ಟಾರ್ಗೆಟ್ ಮಾಡುತ್ತಿದ್ದರು. ಓರ್ವ ಆಟೋ ಚಾಲಕ ಮತ್ತಿಬ್ಬರು ಕಟ್ಟಡ ಕಾರ್ಮಿಕರು ಎಂದು ಹೇಳಿಕೊಂಡಿದ್ದಾರೆ. ಸದ್ಯ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಾಡಹಗಲೇ ವೈದ್ಯನ ಮನೆಗೆ ನುಗ್ಗಿ ಕಳ್ಳತನ : ಸಿಸಿಟಿವಿ ಕ್ಯಾಮರಾದ ಡಿವಿಆರ್, ಬೆಲೆಬಾಳುವ ವಸ್ತುಗಳ ಸಹಿತ ಪರಾರಿ