ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಅವರು ತಮ್ಮ ತಂದೆ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರಿಗೆ ಅವರ ಹುಟ್ಟೂರಾದ ಮುಂಡ್ಕಾದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಡಾ.ಸಾಹಿಬ್ ಸಿಂಗ್ ವರ್ಮಾ ಸಮಾಧಿ ಸ್ಥಳದಲ್ಲಿ ತಂದೆಗೆ ಪುಷ್ಪ ನಮನ ಸಲ್ಲಿಸಿದ ವರ್ಮಾ, ತಮ್ಮ ತಂದೆಯವರ ಈಡೇರದ ಕೆಲಸಗಳನ್ನು ಮುಗಿಸಲು ನಿರ್ಧರಿಸಿರುವುದಾಗಿ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರ್ವೇಶ್ ವರ್ಮಾ, "ನನ್ನ ತಂದೆಯ ಜೀವನವು ನನಗೆ ಸ್ಫೂರ್ತಿಯಾಗಿದೆ. ಅವರ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವುಸು ನನ್ನ ಸಂಕಲ್ಪವಾಗಿದೆ. ದೆಹಲಿಯ ಜನರು ನಮಗೆ ದೊಡ್ಡ ಆಶೀರ್ವಾದ ಮಾಡಿದ್ದು, ದೆಹಲಿಯ ಎಲ್ಲಾ ಶಾಸಕರು ಪ್ರಧಾನಿ ಮೋದಿಯವರ ದೂರದೃಷ್ಟಿಯಂತೆ ದೆಹಲಿಯ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದಾರೆ" ಎಂದು ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ, ಬಿಜೆಪಿಯ ವಿಜೇತ ಅಭ್ಯರ್ಥಿ ಪರ್ವೇಶ್ ವರ್ಮಾ ಈ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಗೆಲುವು ಎಂದು ಶ್ಲಾಘಿಸಿದ್ದರು. "ದೆಹಲಿಯ ಜನರು ಪ್ರಧಾನಿ ಮೋದಿಯವರ ಮೇಲೆ ನಂಬಿಕೆಯನ್ನು ತೋರಿಸಿದ್ದಾರೆ ಮತ್ತು ಈ ಗೆಲುವಿನ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ" ಎಂದು ಅವರು ಹೇಳಿದರು.
2025 ರ ದೆಹಲಿ ಚುನಾವಣೆಯ ಯಮುನಾ ನದಿ ವಿಷಯವು ಪ್ರಮುಖ ವಿಚಾರಗಳಲ್ಲಿ ಒಂದಾಗಿತ್ತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವರ್ಮಾ, ಯಮುನಾ ನದಿಯ ವಿಷಯವು ಸರ್ಕಾರದ ಆದ್ಯತೆಯ ವಿಷಯವಾಗಿದೆ ಎಂದು ಗಮನಸೆಳೆದರು.
ಇದನ್ನೂ ಓದಿ : ಆರ್ಎಸ್ಎಸ್ ಮೌನ ಪ್ರಚಾರದಿಂದ ಗೆದ್ದಿತಾ ಬಿಜೆಪಿ? ದೆಹಲಿಯಲ್ಲಿ ಸಂಘ-ಕಾರ್ಯಕರ್ತರು ನಡೆಸಿದ ಸಭೆಗಳೆಷ್ಟು? - DELHI ELECTIONS 2025