ಪ್ರೀತಿ ಎರಡಕ್ಷರವಾದರೂ ಇಡೀ ಬದುಕನ್ನೇ ಬದಲಾಯಿಸುವ ಶಕ್ತಿ ಅದರೊಳಗಿದೆ. ವಯಸ್ಸು, ಅಂದ - ಚಂದ, ಹಣ, ಜಾತಿ-ಧರ್ಮ ಇದೆಲ್ಲವನ್ನೂ ಮೀರಿಯೂ ಪ್ರೀತಿ ಚಿಗುರೊಡೆಯುತ್ತದೆ. ಇಂತಹ ಪ್ರೇಮಿಗಳಿಗೆ ಫೆಬ್ರವರಿಯಲ್ಲಿನ ಒಂದು ವಾರ ಅವರಿಗಾಗಿಯೇ ಮೀಸಲಿದೆ.. ಫೆಬ್ರವರಿ 7 ರಿಂದ ಫೆಬ್ರವರಿ 14ರವರೆಗಿನ ಒಂದೊಂದು ದಿನ ಅದರದ್ದೇ ಆದ ವಿಶೇಷವನ್ನೊಳಗೊಂಡಿದೆ.
ಅದರಲ್ಲೂ ಇಂದಿನ ಟೆಡ್ಡಿ ಡೇಗೆ ಮುದ್ದಾದ ಟೆಡ್ಡಿ ನೀಡಿ ಸಂಗಾತಿಯನ್ನು ಸಂತಸಪಡಿಸಲು ನಿಮಗೆ ಮತ್ತೊಂದು ಅವಕಾಶ.
ಟೆಡ್ಡಿ ಡೇ: ಟೆಡ್ಡಿ ಡೇ ಫೆಬ್ರವರಿ 10ರಂದು(ಇಂದು) ಆಚರಿಸಲಾಗುತ್ತದೆ. ನಿಮ್ಮ ಸಂಗಾತಿ ಟೆಡ್ಡಿಯನ್ನು ಇಷ್ಟಪಡುತ್ತಿದ್ದರೆ ಇಂದು ಉಡುಗರೆಯಾಗಿ ನೀಡಿದರೆ ಉತ್ತಮ. ಇದನ್ನೂ ನೀಡುವ ಮೂಲಕ ಪ್ರೀತಿಯ ಭಾವನೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಬಹುದು. ಟೆಡ್ಡಿ ಎಂದರೆ ಕಂಫರ್ಟ್, ಪ್ರೀತಿ ಮತ್ತು ವಾತ್ಸಲ್ಯದ ಸಂಕೇತ.
ಟೆಡ್ಡಿ ಕರಡಿಯಲ್ಲ ಅಮೆರಿಕ ಅಧ್ಯಕ್ಷನ ಹೆಸರು: ಟೆಡ್ಡಿ ಬೇರ್ ನೀವು ಅಂದುಕೊಂಡಂತೆ ಬರೀ ಗೊಂಬೆ ಅಲ್ಲ. ಅದಕ್ಕೆ 100 ವರ್ಷಗಳ ಹಿಂದಿನ ಅಮೆರಿಕ ಅಧ್ಯಕ್ಷರ ಕಥೆಯೂ ಇದೆ. ಹೌದು.. ಅದು 1902. ಆಗಿನ ಅಮೆರಿಕ ಅಧ್ಯಕ್ಷ 'ಥಿಯೋಡರ್ ಟೆಡ್ಡಿ ರೂಸ್ವೆಲ್ಟ್' ಭೇಟೆಯಾಡಲು ತೆರಳಿದ್ದರು. ಈ ವೇಳೆ ಮರವೊಂದಕ್ಕೆ ಕಟ್ಟಿ ಹಾಕಿದ್ದ ಕರಡಿ ಕಾಣಿಸುತ್ತದೆ. ಅದಕ್ಕೆ ಅಧ್ಯಕ್ಷ ಶೂಟ್ ಮಾಡಬೇಕಿತ್ತು. ಆದರೆ, ಅದರ ಮುಗ್ಧತೆ ಕಂಡು ಟೆಡ್ಡಿ ರೂಸ್ವೆಲ್ಟ್ ಶೂಟ್ ಮಾಡಲು ನಿರಾಕರಿಸಿ ಬಂದೂಕು ಕೆಳಗಿಳಿಸುತ್ತಾರೆ. ಇದನ್ನು ಕಂಡ ಕಾರ್ಟೂನ್ ಚಿತ್ರಕಾರ ಟೆಡ್ಡಿ ಮತ್ತು ಬೇರ್ ಎಂದು ಕಾರ್ಟೂನ್ ಬಿಡಿಸುತ್ತಾನೆ. ಇದು ಎಲ್ಲೆಡೆ ಜನಪ್ರಿಯವಾಗಿ ಕೊನೆಗೆ ಮೃದುವಾದ ಕರಡಿಯ ಗೊಂಬೆಗಳು ಬಂದವು. ಇದಕ್ಕೆ ಅಧ್ಯಕ್ಷನ ಹೆಸರು ಸೇರಿಸಿ ಟೆಡ್ಡಿ ಬೇರ್ ಎಂದು ಕರೆಯಲು ಆರಂಭಿಸಿ, ಇಂದು ಇದು ಪ್ರೀತಿಯ ಸಂಕೇತವಾಗಿದೆ.
ನಾಲ್ಕನೇ ದಿನ ಈ ಸಂಭ್ರಮ: ವ್ಯಾಲೆಂಟೈನ್ಸ್ ವೀಕ್ ನ 4ನೇ ದಿನವನ್ನು ಟೆಡ್ಡಿ ಡೇ ಆಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳು ಈ ದಿನವನ್ನು ಪರಸ್ಪರ ಟೆಡ್ಡಿ ಬೇರ್ ಅಥವಾ ಆಟಿಕೆ ಸಾಮಗ್ರಿಗಳನ್ನು ನೀಡುವ ಮೂಲಕ ಆಚರಣೆ ಮಾಡಿಕೊಳ್ಳುತ್ತಾರೆ. ಈ ಮೂಲಕ ತಾವುಗಳು ಕಳೆದ ಅಮೂಲ್ಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಈ ದಿವಸವನ್ನು ಪ್ರತಿ ವರ್ಷ ಫೆಬ್ರವರಿ 10 ರಂದು ಅಧಿಕೃತವಾಗಿ ಆಚರಿಸಲಾಗುತ್ತದೆ.
ಈ ದಿನ ಹೆಚ್ಚು ಜನಪ್ರಿಯವಾಗಲು ಕಾರಣ ಎಂದರೆ, ಟೆಡ್ಡಿ ಬೇರ್‌ಗಳು ಮುದ್ದಾದ ಹಾಗೂ ತಮ್ಮ ಮೃದುವಾದ ಮತ್ತು ಏಕಾಂಗಿತನವನ್ನು ದೂರ ಮಾಡುವ ವಸ್ತುವಾಗಿ ಪ್ರಚಲಿತದಲ್ಲಿದೆ. ಒಬ್ಬ ವ್ಯಕ್ತಿಯು ಇನ್ನೊಬ್ಬರಿಗೆ ತೋರುವ ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿ ಜನಪ್ರಿಯವಾಗಿದೆ.
ಟೆಡ್ಡಿ ಡೇ ಕಲ್ಪನೆಯು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಜೊತೆಗೆ ಇದು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಈ ದಿನದಂದು ಜನರು ತಮ್ಮ ಸಂಗಾತಿಗೆ ಟೆಡ್ಡಿ ಉಡುಗೊರೆಯಾಗಿ ನೀಡುವ ಮೂಲಕ, ಪ್ರೇಮ ಪತ್ರಗಳನ್ನು ಬರೆಯುವ ಮೂಲಕ ಅಥವಾ ಮುದ್ದಾದ ಸಂದೇಶಗಳನ್ನು ಕಳುಹಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಕೆಲವು ದಂಪತಿಗಳು ತಮ್ಮ ಪ್ರೀತಿಯನ್ನು ಆಚರಿಸಲು ವಿಶೇಷ ಭೋಜನವನ್ನೂ ಯೋಜಿಸುತ್ತಾರೆ. ಈ ಮೂಲಕ ಒಟ್ಟಿಗೆ ಸಮಯವನ್ನು ಕಳೆಯುತ್ತಾರೆ.
ಪ್ರೇಮಿಗಳ ವಾರದ ಐದನೇ ದಿನವನ್ನು ಪ್ರಾಮಿಸ್ ಡೇ ಎಂದು ಆಚರಿಸಲಾಗುತ್ತದೆ. ಬನ್ನಿ ಹಾಗಾದರೆ. ಇನ್ನು ಪ್ರೇಮಿಗಳ ವಾರ ಯಾವ ದಿನ ಏನನ್ನು ಆಚರಿಸಲಾಗುತ್ತದೆ ಗೊತ್ತಾ.. ಇಲ್ಲಿದೆ ಮಾಹಿತಿ.
![rose day](https://etvbharatimages.akamaized.net/etvbharat/prod-images/10-02-2025/23510154_rose.jpg)
ರೋಸ್ ಡೇ: ಫೆಬ್ರವರಿ 7ರಂದು ರೋಸ್ ಡೇಯೊಂದಿಗೆ ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗುತ್ತದೆ. ಅಧಿಕೃತವಾಗಿ ಪ್ರೀತಿ ಶುರುವಾಗುವುದೇ ಇಲ್ಲಿಂದ. ಈ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಾಗೂ ಅದನ್ನು ಉಳಿಸಿಕೊಳ್ಳಲು ಕೆಂಪು ಗುಲಾಬಿಯನ್ನು ನೀಡುತ್ತಾರೆ. ಈ ಮೂಲಕ ತಮ್ಮ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಈಗಾಗಲೇ ಪ್ರೀತಿಯಲ್ಲಿ ಇರುವವರೂ ಕೂಡ ಈ ದಿನದಂದು ಗುಲಾಬಿ ಹೂವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕೆಂಪು ಗುಲಾಬಿ ಪ್ರೀತಿಯನ್ನು ವ್ಯಕ್ತಪಡಿಸಲು ಸರಿಯಾದ ಮಾರ್ಗವೆಂದು ಪರಿಗಣಿಸಲಾಗುತ್ತದೆ.
ಗುಲಾಬಿಯು ಪ್ರೀತಿಯ ಸಂಕೇತ. ಅದಕ್ಕೂ ಜಾಸ್ತಿಯಾಗಿ ಕೆಂಪು ಬಣ್ಣವೆಂದರೆನೇ ಪ್ರೀತಿ. ನಮ್ಮಲ್ಲಿ ಎಷ್ಟೋ ಹುಡುಗಿಯರು ತಮ್ಮ ಸಂಗಾತಿ ನೀಡಿದ ಗುಲಾಬಿಯನ್ನು ಹಾಗೇ ಪುಸ್ತಕದಲ್ಲಿಟ್ಟು ಈಗಲೂ ಜೋಪಾನವಾಗಿ ಇಟ್ಟ ಉದಾಹರಣೆಗಳಿವೆ. ಇದಕ್ಕೆ ಸೆಲಬ್ರೆಟಿಗಳೂ ಕಮ್ಮಿ ಇಲ್ಲ. ನಟಿ ಜೆನಿಲಿಯಾ ದೇಶಮುಖ್ ಇಂದಿಗೂ ತಮ್ಮ ಪತಿ ರಿತೇಶ್ ದೇಶಮುಖ್ ನೀಡಿರುವ ಗುಲಾಬಿಯನ್ನು ಹಾಗೇ ಇಟ್ಟುಕೊಂಡಿದ್ದು ಒಂದೊಮ್ಮೆ ಅಭಿಮಾನಿಗಳು ಬೆಸ್ಟ್ ಗಿಪ್ಟ್ ಯಾವುದು ಎಂದು ಕೇಳಿದಾಗ ಆ ಗುಲಾಬಿಯನ್ನು ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಹಂಚಿಕೊಂಡಿದ್ದರು.
![propose day](https://etvbharatimages.akamaized.net/etvbharat/prod-images/10-02-2025/23510154_propose.jpg)
- ಪ್ರಪೋಸ್ ಡೇ: ಪ್ರಪೋಸ್ ಡೇ ರೋಸ್ ಡೇ ನಂತರ ಫೆಬ್ರವರಿ 8 ರಂದು ಆಚರಿಸಲಾಗುತ್ತದೆ. ತಮ್ಮೊಳಗೆ ಎಷ್ಟೋ ಸಮಯದಿಂದ ಬಚ್ಚಿಟ್ಟ ಪ್ರೀತಿಯನ್ನು ಅವರೆದುರು ಬಹಿರಂಗ ಪಡಿಸುವ ದಿನ. ಜೀವನ ಪೂರ್ತಿ ಇವರೊಂದಿಗೆ ಬಾಳಿ ಬದುಕಬೇಕೆಂದು ಅಂದವರೊಡನೆ ಪ್ರಪೋಸ್ ಮಾಡಿ ಅವರು ಒಪ್ಪಿದಲ್ಲಿ ಸಂಬಂಧವನ್ನು ಆರಂಭಿಸುವ ದಿನ. ಮನಸಲ್ಲಿನ ಪ್ರೀತಿಯನ್ನು ಸಮರ್ಪಕವಾಗಿ, ಭಯಮುಕ್ತವಾಗಿ ವ್ಯಕ್ತಪಡಿಸುವುದೇ ಒಂದು ಚಾಲೆಂಜ್. ಕೇವಲ ಮಾತಿನಲ್ಲಿ ಪ್ರೀತಿಯಲ್ಲದೇ ಜೊತೆಗಿರುವವರೆಗೂ ಕೊಟ್ಟ ಮಾತಿನಂತೆ ಬದುಕಿದರೇ ನಿಮ್ಮ ನಂಬಿ ಬಂದ ಜೀವಕ್ಕೆ ಇನ್ನೇನು ಬೇಕು.
![CHOCOLATE DAY](https://etvbharatimages.akamaized.net/etvbharat/prod-images/10-02-2025/23510154_chofo.jpg)
- ಚಾಕೊಲೇಟ್ ಡೇ: ವಾರದ ಮೂರನೇ ದಿನ ಫೆ. 9ರಂದು ಚಾಕೊಲೇಟ್ ದಿನವನ್ನು ಪ್ರೇಮಿಗಳು ಆಚರಿಸುತ್ತಾರೆ. ಈ ದಿನ ತಮ್ಮ ಪ್ರೀತಿಯನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯವ ಸಲುವಾಗಿ ತಮ್ಮ ಪ್ರೇಮಿಗೆ ಚಾಕೊಲೇಟ್ ಅನ್ನು ಪ್ರೀತಿಯಿಂದ ನೀಡಲಾಗುತ್ತದೆ. ಚಾಕೊಲೇಟ್‌ಗಳನ್ನು ನೀಡುವುದು ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗವಾಗಿದೆ.
![promise day](https://etvbharatimages.akamaized.net/etvbharat/prod-images/10-02-2025/23510154_promis.jpg)
- ಪ್ರಾಮಿಸ್ ಡೇ: ಫೆಬ್ರವರಿ 11 ವ್ಯಾಲೆಂಟೈನ್ಸ್ ವೀಕ್‌ನ ಐದನೇ ದಿನ. ಪ್ರೀತಿಯ ಅಡಿಪಾಯವೇ ನಂಬಿಕೆ, ಪ್ರಾಮಿಸ್. ಸಂಬಂಧಗಳಲ್ಲಿ ಬದ್ಧತೆ ಮತ್ತು ನಂಬಿಕೆಯ ಮಹತ್ವವನ್ನು ಈ ದಿನ ಒತ್ತಿ ಹೇಳುತ್ತದೆ. ಕೇವಲ ಮಾತಿನಲ್ಲಿ ಪ್ರಾಮಿಸ್ ಅಲ್ಲ ಅದಕ್ಕೂ ಮೀರಿ ನಿಮ್ಮ ಇದ್ದರೆ ಖಂಡಿತಾ ನಿಮ್ಮ ಪ್ರೀತಿ ಎಂದೆಂದಿಗೂ ಮರೆಯಾಗಲ್ಲ.
![hug day](https://etvbharatimages.akamaized.net/etvbharat/prod-images/10-02-2025/23510154_hug.jpg)
- ಹಗ್ ಡೇ: ಹಗ್ ಡೇ ಫೆಬ್ರವರಿ 12 ರಂದು ಆಚರಿಸಲಾಗುತ್ತದೆ. ಹಗ್ ಡೇ ತಮ್ಮ ಪ್ರೇಮಿಗೆ ಮತ್ತಷ್ಟು ಹತ್ತಿರವಾಗುವ ದಿನ. ಪ್ರೀತಿಯ ಅಪ್ಪುಗೆ ಮೂಲಕ ನಿಮ್ಮ ಸಂಗಾತಿಯ ಹೃದಯ ಬಡಿತವನ್ನು ಕೇಳಬಹುದು. ಒಬ್ಬರಿಗೊಬ್ಬರು ಹತ್ತಿರವಾಗಲು ಮತ್ತು ಅವರಿಗೆ ಧೈರ್ಯ ತುಂಬಲು ಹಗ್ ಡೇ ವಿಶೇಷವಾಗಿದೆ.
![kiss day](https://etvbharatimages.akamaized.net/etvbharat/prod-images/10-02-2025/23510154_kiss.jpg)
- ಕಿಸ್ ಡೇ: ಕಿಸ್ ಡೇ ಫೆ. 13. ಪ್ರೇಮಿಗಳ ವಾರದ ಏಳನೇ ದಿನ. ಚುಂಬನದಿಂದ ನಿಮ್ಮ ಪ್ರೀತಿಯ ಸಂಗಾತಿ ಮತ್ತು ನಿಮ್ಮ ನಡುವಿನ ಬಂಧವನ್ನು ಬಲಪಡಿಸುತ್ತದೆ. ಚುಂಬನಗಳ ಮೂಲಕ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುವ ದಿನ ಇದಾಗಿದೆ.
- ವ್ಯಾಲೆಂಟೈನ್ಸ್ ಡೇ: ಪ್ರೇಮಿಗಳ ವಾರದ ಕೊನೆಯ ದಿನ ವ್ಯಾಲೆಂಟೈನ್ಸ್ ಡೇ. ಫೆಬ್ರವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳು ಅತ್ಯಂತ ಸಂತಸದಿಂದ ಈ ದಿನವನ್ನು ಆಚರಿಸುತ್ತಾರೆ. ಅತ್ಯಂತ ರೋಮ್ಯಾಂಟಿಕ್ ದಿನವೂ ಹೌದು. ಇಡೀ ದಿನ ನಿಮ್ಮ ಸಂಗಾಂತಿಯೊಂದಿಗೆ ದಿನ ಕಳೆದರೆ ಉತ್ತಮ. ಈ ದಿನ ಕೂಡ ಮರೆಯಲಾಗದಂತಹ ಉಡುಗೊರೆಯನ್ನು ನೀಡಬಹುದು. ಆದಷ್ಟು ಈ ದಿನ ನಿಮ್ಮ ಪ್ರೇಮಿ ಸಂತೋಷವಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಜವಬ್ದಾರಿ.
ಇದನ್ನೂ ಓದಿ: Valentine's Day; ಪ್ರೇಮಿಗಳ ದಿನದ ಇತಿಹಾಸ ತಿಳಿಯಿರಿ