ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದಿನ ಆವೃತ್ತಿಗಾಗಿ ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಬಾರಿ ಒಟ್ಟು 1,574 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, 574 ಆಟಗಾರರ ಆಯ್ದ ಪಟ್ಟಿ (ಶಾರ್ಟ್ಲಿಸ್ಟ್) ಮಾಡಲಾಗಿದೆ.
ಈ ಪಟ್ಟಿಯಲ್ಲಿ ಹಿರಿಯರು, ಕಿರಿಯರು ಮತ್ತು ಅನ್ಕ್ಯಾಪ್ಡ್(ರಾಷ್ಟ್ರೀಯ ತಂಡದಲ್ಲಿ ಆಡದವರು) ಆಟಗಾರರಿದ್ದಾರೆ. ಅಚ್ಚರಿಯೆಂಬಂತೆ, 13 ವರ್ಷದ ಹುಡುಗನ ಹೆಸರೂ ಇದರಲ್ಲಿದೆ. ಈ ಹುಡುಗ 30 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜು ಪ್ರವೇಶಿಸಲಿದ್ದಾರೆ. ಇವರನ್ನು ಹರಾಜಿನಲ್ಲಿ ಯಾವ ಫ್ರಾಂಚೈಸಿ ಖರೀದಿಸಲಿದೆ ಎಂಬುದು ಸದ್ಯದ ಕುತೂಹಲ.
ವೈಭವ್ ಸೂರ್ಯವಂಶಿ ಎಂಬವರೇ ಐಪಿಎಲ್ ಮೆಗಾ ಹರಾಜಿಗೆ ತನ್ನ ಹೆಸರನ್ನು ನೋಂದಾಯಿಸಿಕೊಂಡ ಹುಡುಗ. 2011ರಲ್ಲಿ ಜನಿಸಿದ ಇವರಿಗೆ ಸದ್ಯ 13 ವರ್ಷ. ಬಿಹಾರದ ತಾಜಪುರ ಗ್ರಾಮದವರಾದ ವೈಭವ್, ನಾಲ್ಕನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದರು. ಮಗನ ಕ್ರಿಕೆಟ್ ಪ್ರೀತಿಯನ್ನು ಕಂಡ ತಂದೆ ಸಂಜೀವ್ ಸೂರ್ಯವಂಶಿ ವಿಶೇಷ ಮೈದಾನ ನಿರ್ಮಿಸಿದ್ದರು. ಬಳಿಕ ವೈಭವ್‌ನನ್ನು ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ದರು.
Great news for cricket fans!
— Bihar Foundation (@biharfoundation) September 2, 2024
Young sensation Vaibhav Suryavanshi, just 13, from Samastipur, Bihar, has made it to the Indian Under-19 cricket team. He'll be showcasing his batting skills against Australia in a crucial series.
He made history as one of the youngest players… pic.twitter.com/L9a5BRiNIe
ಎರಡು ವರ್ಷಗಳ ಕಾಲ ಅಲ್ಲಿ ತರಬೇತಿ ಪಡೆದ ವೈಭವ್ ಅಂಡರ್-16 ತಂಡದಲ್ಲಿ ಸ್ಥಾನ ಪಡೆದುಕೊಂಡರು. ಆಗ ಕೇವಲ 10 ವರ್ಷ ವಯಸ್ಸು. ಆ ವಯಸ್ಸಿನಲ್ಲಿ ಬಿಹಾರ ರಾಜ್ಯ ಮಟ್ಟದ ಎಲ್ಲಾ ಪಂದ್ಯಾವಳಿಗಳಲ್ಲೂ ಆಡಿದ್ದರು. ಚಿಕ್ಕ ವಯಸ್ಸಿನಲ್ಲಿ ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟ್ರೋಫಿಗಳಲ್ಲಿ ಆಡಿದ್ದಾರೆ. ಅಂಡರ್ 19 ತಂಡದಲ್ಲಿ ಆಡಿರುವ ಇವರು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅನ್ಅಫೀಶಿಯಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.
ಈ ಪಂದ್ಯದಲ್ಲಿ 64 ಎಸೆತಗಳನ್ನೆದುರಿಸಿದ್ದ ಅವರು 104 ರನ್ ಪೇರಿಸಿದ್ದರು. 58 ಎಸೆತಗಳಲ್ಲೇ ಶತಕ ಪೂರೈಸಿದ್ದರು. 14 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಅಂಡರ್-19 ಟೆಸ್ಟ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
17 ವರ್ಷದ ಆಯುಷ್ ಮ್ಹಾತ್ರೆ: ಉಳಿದಂತೆ, ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 2ನೇ ಅತೀ ಕಿರಿಯ ಆಟಗಾರರಲ್ಲಿ ಆಯುಷ್ ಮ್ಹಾತ್ರೆ ಹೆಸರು ಕೂಡಾ ಇದೆ. 17 ವರ್ಷದ ಮ್ಹಾತ್ರೆ, ಮೆಗಾ ಹರಾಜಿಗಾಗಿ ತಮ್ಮ ಹೆಸರು ನೋಂದಾಯಿಸಿದ್ದಾರೆ.
ಆಯುಷ್ ದಾಖಲೆ: ಮ್ಹಾತ್ರೆ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಚೊಚ್ಚಲ ಇನ್ನಿಂಗ್ಸ್‌ನಲ್ಲೇ ಮಹಾರಾಷ್ಟ್ರ ವಿರುದ್ಧ 52 ರನ್ ಗಳಿಸಿದ್ದರು. ರಣಜಿಯಲ್ಲಿ ಐದು ಪಂದ್ಯಗಳು ಮತ್ತು ಒಂಬತ್ತು ಇನ್ನಿಂಗ್ಸ್ ಆಡಿರುವ ಇವರು 45.33ರ ಸರಾಸರಿಯಲ್ಲಿ 408 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಒಂದು ಅರ್ಧ ಶತಕಗಳಿವೆ. ಇವರ ಗರಿಷ್ಠ ಸ್ಕೋರ್ 176.
ಇದನ್ನೂ ಓದಿ: IPLನ ಪ್ರತೀ ಪಂದ್ಯದಿಂದ ಒಬ್ಬ ಆಟಗಾರ ಗಳಿಸುವ ಹಣ ಎಷ್ಟು? ಸಂಪೂರ್ಣ ವಿವರ