ಹಾವೇರಿ : ಜಿಲ್ಲೆಯ ಶಿಗ್ಗಾಂವ್ ತಾಲೂಕು ಗೋಟಗೊಡಿಯ ಕಲಾ ಕುಟೀರ ರಾಜ್ಯದಲ್ಲಿ ಸಿಮೆಂಟ್ ಶಿಲ್ಪ ಕಲೆಗೆ ಹೆಸರುವಾಸಿ. ರಾಜ್ಯದಲ್ಲಿರುವ ಬಹುತೇಕ ಥೀಮ್ ಪಾರ್ಕ್ಗಳು ಈ ಕುಟೀರದಲ್ಲಿ ತಯಾರಿಸುವ ಸಿಮೆಂಟ್ ಶಿಲ್ಪ ಕಲಾಕೃತಿಗಳಿಂದ ನಿರ್ಮಾಣವಾಗಿವೆ.
ದಿವಂಗತ ಡಾ. ಟಿ. ಬಿ ಸೋಲಬಕ್ಕನವರ್ ಸ್ಥಾಪಿಸಿರುವ ಕಲಾ ಕುಟೀರಕ್ಕೆ ಇದೀಗ 34 ವರ್ಷ. ಆರಂಭದಲ್ಲಿ ಬೆರಳೆಣಿಕೆಯಷ್ಟು ಸಿಮೆಂಟ್ ಶಿಲ್ಪ ಕಲಾಕೃತಿ ರಚಿಸುತ್ತಿದ್ದ ಕುಟೀರ ಇದೀಗ ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಿಮೆಂಟ್ ಶಿಲ್ಪಕಲಾಕೃತಿ ನಿರ್ಮಿಸುತ್ತಿದೆ.
ದಿನನಿತ್ಯ ನೂರಕ್ಕೂ ಅಧಿಕ ಕಲಾವಿದರು ಇಲ್ಲಿ ಕಲಾಕೃತಿ ರಚಿಸುತ್ತಾರೆ. ಕಟ್ಟಡ ಕಟ್ಟಲು ಬಳಸುವ ಸ್ಟೀಲ್, ಸಿಮೆಂಟ್, ಮರಳು, ಜಾಲರಿ ಮತ್ತು ಪೈಯಿಂಟ್ಗಳಲ್ಲಿ ಇಲ್ಲಿ ಕಲಾಕೃತಿಗಳು ಅರಳುತ್ತಿವೆ. ಈ ಕುಟೀರದ ವಿಶೇಷತೆ ಅಂದರೆ ರಿಯಾಲಿಸ್ಟಿಕ್. ಕಲಾಕೃತಿಗಳನ್ನು ನೋಡಿದರೆ ಅವು ಜೀವಂತವಾಗಿರುವ ಅನುಭವವನ್ನು ನೀಡುತ್ತವೆ. ನಾಡಿನ ಶರಣ ಪರಂಪರೆ, ಎತ್ತುಗಳ ತಳಿಗಳು, ಪ್ರಾಣಿಗಳು, ಮಹನೀಯರ ಮೂರ್ತಿಗಳು, ಜಾನಪದ ಕಲೆಗಳ ಕಲಾಕೃತಿಗಳು, ರಾಜ್ಯದ ಬುಡಕಟ್ಟು ಜನರ ಕಲಾಕೃತಿಗಳು, ಗ್ರಾಮೀಣ ಜೀವನದ ಕಲಾಕೃತಿಗಳು ಸಹಜತೆಗೆ ಹತ್ತಿರವಾಗಿವೆ.
ದಿವಂಗತ ಟಿ. ಬಿ ಸೊಲಬಕ್ಕನವರ ಮಾರ್ಗದರ್ಶನದಲ್ಲಿಯೇ ಅವರ ಮಗ ಕುಟೀರ ಮುನ್ನೆಡೆಸುತ್ತಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳಲ್ಲಿ ಸಹ ಇವರ ಕಲಾಕೃತಿ ಥೀಮ್ ಪಾರ್ಕ್ಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ಕಲಾಕೃತಿ ನೋಡಿದರೆ ನೈಜಜೀವಗಳನ್ನು ನೋಡಿದ ಅನುಭವವನ್ನು ಈ ಕಲಾಕೃತಿಗಳು ನೀಡುತ್ತಿವೆ. ಸದ್ಯ ಕುಟೀರದಲ್ಲಿ ಖಾಸಗಿ ವ್ಯಕ್ತಿಗಳ ರೆಸಾರ್ಟ್ಗಳಿಗೆ ಥೀಮ್ಪಾರ್ಕ್ಗಳಿಗೆ ಕಲಾಕೃತಿ ರಚಿಸುತ್ತಿದೆ. ಗ್ರಾಮೀಣ ಸೊಗಡಿನ ಕ್ರೀಡೆಗಳಾದ ಗುಂಡಾಟ, ಹಗ್ಗಜಗ್ಗಾಟ, ಜೋಕಾಲಿ, ಮರಕೋತಿ ಆಟ, ಚಿನ್ನಿಕೋಲು, ಗಾಲಿ ಓಡಿಸುವುದು, ಮರಕೋತಿ ಆಟ, ಕಣ್ಣಾಮುಚ್ಚಾಲೆ ಸೇರಿದಂತೆ ಹಲವು ಕಲಾಕೃತಿಗಳು ಗ್ರಾಮೀಣ ಸೊಗಡು ಬೀರುತ್ತಿವೆ.
ಕಲಾಕೃತಿಗಳಲ್ಲಿ ಗ್ರಾಮೀಣ ಸೊಗಡು; ಗ್ರಾಮೀಣ ಭಾಗದ ಜೋಗತಿಯರು, ವೇಷಗಾರರು, ದುರ್ಗಮುರ್ಗೆಯರು, ಕೋಲೆಬಸವ ಅಂದಿನ ಜೀವನದ ಮಜಲು ನೆನಪಿಸುತ್ತವೆ. ಕುಸ್ತಿ ಆಡುವ ಫೈಲ್ವಾನರು, ಶೆಟ್ಟರ್ ಅಂಗಡಿ ಟೇಲರ್, ಕುಟ್ಟುವಿಕೆ, ಬೀಸುವಿಕೆ, ಕೌದಿ ಹೊಲೆಯುವಿಕೆ, ಬೀದಿನಾಯಿಗಳು, ಕುರಿ ಕಾಯುವ ಕುರಿಗಾಯಿಗಳ ಜೀವನ ಒಂದಕ್ಕಿಂತ ಒಂದು ಕಲಾಕೃತಿಗಳು ಅಂದವಾಗಿವೆ. ಲಂಬಾಣಿಗಳ ಗುಂಪು, ಹಳ್ಳಿಪಂಚಾಯಿತಿ ಕೃತಿಗಳು ನೈಜವಾಗಿವೆ.
ಸೊಲಬಕ್ಕನವರ್ ಶಿಲ್ಪ ಕಲಾ ಕುಟೀರ ಕಲಾಕೃತಿಗಳು ತಯಾರಿಸುವ ಕಾರ್ಖಾನೆಯಂತೆ ಕಾಣುತ್ತದೆ. ಸ್ಟೀಲ್ ಸಿಮೆಂಟ್ ಕಟ್ಟಡಕ್ಕೆ ಬಳಸುವ ವಸ್ತುಗಳಿಂದ ಇಲ್ಲಿಯ ಕಲಾಕೃತಿಗಳು ಮೈದಳೆಯುತ್ತವೆ. ಕಲಾಕೃತಿಗೆ ಸಾಮಾಜಿಕ ಕಾಳಜಿ ಇರಬೇಕು ಅದು ಶ್ರೀಮಂತರ ಶೋಕಿಯಾಗಬಾರದು ಎನ್ನುವುದು ಈ ಕುಟೀರದ ಉದ್ದೇಶ. ಈ ನೆಲದ ಬದುಕನ್ನು ಈ ನೆಲದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನ ಕುಟೀರ ಮಾಡುತ್ತಿದೆ.
ಕಲಾ ಕುಟೀರ ಶಿಬಿರದ ಮುಖ್ಯಸ್ಥ ರಾಜಹರ್ಷ ಮಾತನಾಡಿ, 'ನಮ್ಮ ತಂದೆ ಸೊಲಬಕ್ಕನವರು ಈ ಕಲಾ ಕುಟೀರವನ್ನ ಸ್ಥಾಪಿಸಿ ನನಗೆ ಮಾರ್ಗದರ್ಶನ ನೀಡಿದರು. ನಾನೀಗ 150 ಜನರ ಟೀಂ ರೆಡಿ ಮಾಡಿದ್ದೇನೆ. ಬೇರೆ ಬೇರೆ ರೀತಿಯ ಥೀಮ್ ಪಾರ್ಕ್ನ್ನ ರೆಡಿ ಮಾಡುತ್ತಿರುತ್ತೇವೆ. ಸಂಗೊಳ್ಳಿಯಲ್ಲಿ ಥೀಮ್ ಪಾರ್ಕ್ ನಿರ್ಮಿಸಿದ್ದೇವೆ. ನಾವು ರಿಯಾಲಿಸ್ಟಿಕ್ ಕಲಾಕೃತಿಗಳನ್ನ ರಚಿಸುತ್ತಿದ್ದೇವೆ' ಎಂದು ಹೇಳಿದರು.
ಕಲಾವಿದ ಸುನೀಲ್ ಮಾತನಾಡಿ, 'ಇದೊಂದು ಕಲಾಸಂಸ್ಥೆಯಾಗಿದ್ದು, ಇಲ್ಲಿ 200ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳು ಇದ್ದಾರೆ. ಇಲ್ಲಿ ಶಿಲ್ಪಾ ಕಲಾವಿದರು, ಪೈಂಟಿಂಗ್ ಕಲಾವಿದರು ಇದ್ದಾರೆ. ನಮ್ಮ ಸಂಸ್ಥೆಯ ಉದ್ದೇಶ ಥೀಮ್ ಪಾರ್ಕ್ಗಳ ರಚನೆ. ಇಲ್ಲಿನ ಕಲಾಕೃತಿಗಳು ಸುಮಾರು 60 ರಿಂದ 80 ವರ್ಷದವರೆಗೆ ಬಾಳಿಕೆ ಬರುತ್ತವೆ' ಎಂದರು.
ಇದನ್ನೂ ಓದಿ : ಒಕ್ಕುಂದ ಉತ್ಸವ ನೃಪತುಂಗ ಜ್ಯೋತಿ ಮೆರವಣಿಗೆ : ಗೊಂಬೆ-ಡೊಳ್ಳು ಕುಣಿತದ ಆಕರ್ಷಣೆ - OKKUNDA UTSAVA