ಕಾರವಾರ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾದ ಬೆನ್ನಲ್ಲೇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ಸಾಲ ನೀಡುತ್ತಿದ್ದವನಿಂದ ಸಾಲ ಪಡೆದು ಮತ್ತೆ ಕೇಳಿದಷ್ಟು ಸಾಲ ನೀಡದಿದ್ದಕ್ಕೆ ಸಾಲ ನೀಡುತ್ತಿದ್ದವನನ್ನೇ ಅಪಹರಿಸಿದ ಪ್ರಕರಣವೊಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಜನವರಿ 9ರ ರಾತ್ರಿ 10 ಗಂಟೆ ಸುಮಾರಿಗೆ ಮನೆ ಕಡೆ ಹೊರಟಿದ್ದ ಮುಂಡಗೋಡ ನಿವಾಸಿ ಜಮೀರ್ ದರ್ಗಾವಲೆಯನ್ನು ಆತನ ಬೈಕ್ಗೆ ಗುದ್ದಿ ಹಲವರು ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಹೊತ್ತೊಯ್ದಿದ್ದರು. ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ಎಚ್ಚೆತ್ತ ಉತ್ತರ ಕನ್ನಡ ಪೊಲೀಸರು ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದರು. ಆ ವೇಳೆ ಅಪಹರಣಕಾರರು ಜಮೀರ್ ಕುಟುಂಬಸ್ಥರಿಗೆ ಕರೆ ಮಾಡಿ ಸುಮಾರು 32 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಆಗ ಹೆದರಿದ ಕುಟುಂಬಸ್ಥರು ಕೂಡಲೇ 18 ಲಕ್ಷ ರೂಪಾಯಿ ಹಣವನ್ನು ಅವರು ಕೇಳಿದ ಸ್ಥಳಕ್ಕೆ ತಲುಪಿಸಿದ್ದರು. ಬಳಿಕ ಜಮೀರ್ನನ್ನು ಹಾವೇರಿಯಲ್ಲಿ ಬಿಟ್ಟು ಪರಾರಿ ಆಗಿದ್ದ ಗ್ಯಾಂಗ್ನ ನಾಲ್ಕು ತಂಡವನ್ನು ಹಂತ ಹಂತವಾಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಈವರೆಗೆ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ನು ಪ್ರಕರಣದಲ್ಲಿ ಪ್ರಮುಖ ಕಿಂಗ್ ಪಿನ್ ಕಳೆದ 20 ದಿನಗಳಿಂದ ಮುಂಬೈನಲ್ಲಿ ತಲೆ ಮರಿಸಿಕೊಂಡಿದ್ದ ಎಂಬುದು ಪೊಲೀಸರ ಅರಿವಿಗೆ ಬಂದಿತ್ತು. ಬಳಿಕ ಮುಂಬೈಗೆ ಹೋಗಿದ್ದ ಮುಂಡಗೋಡ ಪಿಎಸ್ಐ ಪರಶುರಾಮ್, ಪಿಸಿ ಅನ್ವರ್ ಖಾನ್ ಹಾಗೂ ಕೊಟ್ರೇಶ್ ಒಂದೆರಡು ವಾರಗಳ ಕಾಲ ನಿರಂತರ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದರು.
ಅದರಂತೆ ಬಂಧಿತ ಆರೋಪಿಗಳನ್ನು ವಿಚಾರಿಸಿದಾಗ ಭಯಾನಕ ಸತ್ಯ ಹೊರ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿಯಾಗಿರುವ ಜಮೀರ್ ದರ್ಗಾವಲೆ ಕಳೆದ ಮೂರು ವರ್ಷಗಳಿಂದ ಮರಳು ದಂಧೆಯ ಜೊತೆಗೆ ಮೀಟರ್ ಬಡ್ಡಿ ದಂಧೆಯ ವ್ಯವಹಾರ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಕೋಟ್ಯಾಂತರ ರೂಪಾಯಿ ಹಣ ಸಂಪಾದಿಸಿದ್ದ. ಹುಬ್ಬಳ್ಳಿ, ಹಾವೇರಿ ಹಾಗೂ ಮುಂಡಗೋಡ ವ್ಯಾಪ್ತಿಯಲ್ಲಿ ಯಾರಾದರೂ ಕೊಲೆ, ಸುಲಿಗೆ ಕೇಸ್ನಲ್ಲಿ ಜೈಲಿಗೆ ಹೋದರೆ ಅವರಿಗೆ ಆರ್ಥಿಕ ಸಹಾಯ ಮಾಡಿ ಬಿಡಿಸಿಕೊಂಡು ಬರುತ್ತಿದ್ದ. ಅವರನ್ನು ತನ್ನ ಜೊತೆ ಇಟ್ಟುಕ್ಕೊಂಡು ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ.
ಅದರಂತೆ ಜಮೀರ್ ದರ್ಗಾವಲೆ 1 ಲಕ್ಷ ರೂ. ಸಾಲ ಕೊಟ್ಟರೆ ಅದಕ್ಕೆ ತಿಂಗಳಿಗೆ 30,000 ರೂಪಾಯಿ ಬಡ್ಡಿ ಕಟ್ಟಬೇಕಿತ್ತು. ಒಂದು ವೇಳೆ ಅಸಲು ಕಟ್ಟಲು ಹೋದರೆ ಅದನ್ನು ಸ್ವಿಕರಿಸದೆ, ಕೇವಲ ಬಡ್ಡಿ ಮಾತ್ರ ತಿಂಗಳಿಗೆ ಕೊಡುವಂತೆ ಅವಾಜ್ ಹಾಕಿಸುತ್ತಿದ್ದ. 30 ಪ್ರತಿಶತ ಬಡ್ಡಿಯಲ್ಲಿ 15 ಪ್ರತಿಶತ ತಾನು ಪಡೆದು ಇನ್ನುಳಿದ 15 ಪ್ರತಿಶತ ಹಣವನ್ನು ಬಡ್ಡಿ ವಸೂಲಿ ಮಾಡಿದ ಹುಡುಗರಿಗೆ ಕೊಡುತ್ತಿದ್ದ. ಸುಮಾರು 150ಕ್ಕೂ ಹೆಚ್ಚು ಹುಡುಗರ ಸಹಾಯದಿಂದ ಈತ ಮೀಟರ್ ಬಡ್ಡಿ ದಂಧೆ ಮಾಡುತ್ತಿರುವ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮೀರ್ ದರ್ಗಾವಲೆ ಸಾಲ ನೀಡುವಾಗ ಖಾಲಿ ಚೆಕ್ ಪಡೆಯುತ್ತಾನೆ. ಅಲ್ಲದೆ ದೊಡ್ಡ ಹುಡುಗರ ಗ್ಯಾಂಗ್ ಈತನ ಜೊತೆಗೆ ಇರುವುದರಿಂದ ಯಾರೂ ಕೂಡ ಈತನ ವಿರುದ್ಧ ದೂರು ಕೊಡಲು ಕೂಡ ಹೋಗುತ್ತಿರಲಿಲ್ಲ. ಈ ವಿಷಯ ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆಯೇ ಸಭೆ ನಡೆಸಿದ ಉತ್ತರ ಕನ್ನಡ ಎಸ್ಪಿ ಎಂ.ನಾರಾಯಣ ಸ್ಥಳೀಯರಿಂದ ಖಚಿತ ಮಾಹಿತಿ ಪಡೆದು, ಆತನ ಆಪ್ತ ನವಲೆ ಎಂಬುವವನ ಮನೆ ಮೇಲೆ ದಾಳಿ ಮಾಡಿದಾಗ ಸುಮಾರು 250 ಖಾಲಿ ಚೆಕ್ ಆತನ ಮನೆಯಲ್ಲಿ ಪತ್ತೆ ಆಗಿದೆ ಎಂದರು.
ಜಮೀರ್ ದರ್ಗಾವಾಲೆ ಸೂಚನೆಯಂತೆ ಬಡ್ಡಿ ವಸೂಲಿ ಕೆಲಸ ಮಾಡುತ್ತಿದ್ದ ಖ್ವಾಜಾನೇ ಎಂಬಾತನೇ ಜಮೀರ್ ದರ್ಗಾವಾಲೆ ಅಪಹರಣ ಮಾಡಿದ್ದ! ಖ್ವಾಜಾಗೆ ಸಾಲ ಬೇಕಿತ್ತು. ಆದರೆ ಸಾಲ ಕೊಡಲು ಜಮೀರ್ ಒಪ್ಪಿರಲಿಲ್ಲ. ತನಗೆ ಹಣ ಕೊಟ್ಟಿಲ್ಲ ಎಂಬ ಕೋಪದಲ್ಲಿದ್ದ ಖ್ವಾಜಾ ಹಣಕ್ಕಾಗಿ ಏನಾದರೂ ಮಾಡಬೇಕೆಂದುಕೊಂಡಿದ್ದ. ಜಮೀರ್ ಕಳೆದ ಎರಡು ವರ್ಷಗಳಿಂದ ಕೇವಲ ಮೀಟರ್ ಬಡ್ಡಿ ದಂಧೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಮಾಡಿರುವುದು ಖ್ವಾಜಾ ಹಾಗೂ ಆತನ ಸ್ನೇಹಿತರಿಗೆ ಗೊತ್ತಿತ್ತು. ಹಾಗಾಗಿ ಆತನನ್ನು ಅಪಹರಿಸಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ರೂಮ್ಗೆ ನುಗ್ಗಿ ವಿದ್ಯಾರ್ಥಿಗಳನ್ನು ಬೆದರಿಸಿ ಸುಲಿಗೆ: ಗೃಹರಕ್ಷಕ ದಳದ ಸಿಬ್ಬಂದಿ ಬಂಧನ