ಬಾರ್ಬಡೋಸ್ (ವೆಸ್ಟ್ ಇಂಡೀಸ್):ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಅಂತಿಮ ಘಟ್ಟದಲ್ಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿ ಸುತ್ತಿಗೆ ಬಂದಿದ್ದು, ಇಂದು ರಾತ್ರಿ ನಡೆಯುವ ಫೈನಲ್ನಲ್ಲಿ ಗೆಲ್ಲುವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಕಳೆದ 7 ತಿಂಗಳಲ್ಲಿ ಐಸಿಸಿಯ ದೊಡ್ಡ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ. ಇತ್ತ ದಕ್ಷಿಣ ಆಫ್ರಿಕಾ ಮೂರು ದಶಕಗಳ ಬಳಿಕ ಮೊದಲ ಸಲ ಅಂತಿಮ ಹಂತಕ್ಕೆ ಬಂದಿದ್ದು, ಎರಡು ಮದಗಜ ತಂಡಗಳ ನಡುವಿನ ಹೋರಾಟ ಕ್ರಿಕೆಟ್ ರಸಿಕರಿಗೆ ರಸದೌತಣ ನೀಡುವುದು ಪಕ್ಕಾ ಆಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ದಿಗ್ಗಜ ಕ್ರಿಕೆಟಿಗ ಸೌರವ್ ಗಂಗೂಲಿ, ಭಾರತ ತಂಡ ಬಲಿಷ್ಠವಾಗಿದೆ. ಫೈನಲ್ನಲ್ಲಿ ಗೆಲ್ಲುವ ಎಲ್ಲ ಅರ್ಹತೆಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾ ಕೂಡ ಮೊದಲ ಸಲ ಫೈನಲ್ಗೆ ಬಂದಿದ್ದು, ಪಂದ್ಯ ರೋಚಕವಾಗಿರುವ ನಿರೀಕ್ಷೆ ಇದೆ. ರೋಹಿತ್ ಶರ್ಮಾ ಬಳಗ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸಮುದ್ರಕ್ಕೆ ಹಾರುವ ರೋಹಿತ್:ರೋಹಿತ್ ಶರ್ಮಾ ನಾಯಕತ್ವ ವಿಶೇಷತೆಯಿಂದ ಕೂಡಿದೆ. 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲೂ ಅವರು ತಂಡವನ್ನು ಫೈನಲ್ಗೆ ತಂದಿದ್ದು, ದುರಾದೃಷ್ಟವಶಾತ್ ಸೋಲಾಗಿತ್ತು. 7 ತಿಂಗಳ ಅವಧಿಯಲ್ಲಿ ಬಂದ ಟಿ-20 ವಿಶ್ವಕಪ್ನಲ್ಲಿ ತಂಡ ಮತ್ತೆ ಚಾಂಪಿಯನ್ ಹಂತಕ್ಕೆ ಬಂದಿದೆ. ಈ ಬಾರಿ ತಂಡ ಗೆಲುವು ಸಾಧಿಸದೇ ಇದ್ದಲ್ಲಿ ರೋಹಿತ್ ಶರ್ಮಾ ಬಾರ್ಬಡೋಸ್ನಲ್ಲಿನ ಸಮುದ್ರಕ್ಕೆ ಹಾರಲಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ರೋಹಿತ್ ಶರ್ಮಾ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇಂತಿಪ್ಪ ತಂಡ ಈ ಬಾರಿ ಟ್ರೋಫಿ ಎತ್ತಿಹಿಡಿಯಲೇಬೇಕು. ಕಾರಣ ರೋಹಿತ್ಗೆ ಇದು ಕೊನೆಯ ಐಸಿಸಿ ಟೂರ್ನಿಯಾಗಿರಲಿದೆ. ಮುಂದಿನ ವಿಶ್ವಕಪ್ವರೆಗೆ ಅವರು ನಾಯಕರಾಗಿ ಮುಂದುವರಿಯಲಿದ್ದಾರೋ ಇಲ್ಲವೋ ತಿಳಿಯದು. ಈ ಸಲದ ಅವಕಾಶವನ್ನು ಅವರು ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದಿದ್ದಾರೆ.
ರೋಹಿತ್ ಶರ್ಮಾ ತಂಡವನ್ನು ನಾಯಕರಾಗಿ ಅಲ್ಲದೇ, ಬ್ಯಾಟರ್ ಆಗಿಯೂ ಮುನ್ನಡೆಸಿದ್ದಾರೆ. ಭಾರತವು ಗೆಲುವಿನ ಮೂಲಕ ವಿಶ್ವಕಪ್ ಮುಗಿಸಲಿದೆ ಎಂದು ಭಾವಿಸುತ್ತೇನೆ. ಆಟಗಾರರು ಭಯವಿಲ್ಲದೇ ಆಡಬೇಕು. ತಂಡ ಗೆಲ್ಲಲಿ ಎಂದು ನಾನು ಆಶಿಸುತ್ತೇನೆ. ಐಸಿಸಿ ಟೂರ್ನಿಗಳನ್ನು ಗೆಲ್ಲಲು ಸ್ವಲ್ಪ ಅದೃಷ್ಟವೂ ಬೇಕು ಎಂದು ಸೌರವ್ ಗಂಗೂಲಿ ಹೇಳಿದರು.
ಇದನ್ನೂ ಓದಿ:ವಿಂಡೀಸ್, ಇಂಗ್ಲೆಂಡ್ ಬಳಿಕ ಭಾರತಕ್ಕೆ 2ನೇ ಬಾರಿ T-20 ವಿಶ್ವ ಚಾಂಪಿಯನ್ ಆಗುವ ಅವಕಾಶ - T20 world champion