ನವದೆಹಲಿ: ಕೊಳೆಗೇರಿಯ ಜನರಿಗೆ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನಿರ್ಮಿಸಲು ಕೂಡ ರಾಜ್ಯ ಸರ್ಕಾರಗಳ ಬಳಿ ಹಣವಿಲ್ಲ. ಅಲ್ಲದೇ ಎಷ್ಟೋ ಜನರಿಗೆ ಶುದ್ಧ ಕುಡಿಯುವ ನೀರೂ ಸಿಗುತ್ತಿಲ್ಲ. ಅಂಥದ್ದರಲ್ಲಿ ನೀವು ಸೈಕಲ್ ಟ್ರ್ಯಾಕ್‌ಗಳನ್ನು ನಿರ್ಮಿಸುವ ಬಗ್ಗೆ ಹಗಲುಗನಸು ಕಾಣುತ್ತೀರಲ್ಲ? ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿತು.
ದೇಶದ ಆದ್ಯತೆಗಳನ್ನು ಸರಿಯಾಗಿ ತಿಳಿಯಿರಿ: ದೇಶಾದ್ಯಂತ ಪ್ರತ್ಯೇಕ ಸೈಕಲ್ ಟ್ರ್ಯಾಕ್‌ಗಳನ್ನು ನಿರ್ಮಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರ ನ್ಯಾಯಪೀಠ, ದೇಶದ ಮುಂದಿರುವ ಆದ್ಯತೆಗಳೇನು ಎಂಬುದನ್ನು ಅರ್ಜಿದಾರರು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಸೈಕಲ್ ಟ್ರ್ಯಾಕ್ಗಿಂತಲೂ ಪ್ರಮುಖ ತುರ್ತು ವಿಷಯಗಳು ದೇಶದ ಮುಂದಿದ್ದು, ಅವುಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿತು.
"ಕೊಳೆಗೇರಿಗಳಲ್ಲಿ ಜನ ಎಂಥ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಅಲ್ಲಿಗೆ ಹೋಗಿ ನೋಡಿ. ಇವರಿಗೆ ಮನೆಗಳನ್ನು ನೀಡಲು ಸಹ ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಅಂಥದ್ದರಲ್ಲಿ ನೀವು ಸೈಕಲ್ ಟ್ರ್ಯಾಕ್‌ಗಳ ಬಗ್ಗೆ ಹಗಲುಗನಸು ಕಾಣುತ್ತಿರುವಿರಲ್ಲ. ಜನರಿಗೆ ಮೂಲಭೂತ ಸೌಕರ್ಯಗಳು ಬೇಕಿವೆ, ಅದನ್ನು ಬಿಟ್ಟು ನೀವು ಸೈಕಲ್ ಟ್ರ್ಯಾಕ್‌ಗಳ ಬಗ್ಗೆ ಮಾತನಾಡುತ್ತಿರುವಿರಿ" ಎಂದು ನ್ಯಾಯಾಲಯ ಹೇಳಿತು.
"ನಮ್ಮ ಆದ್ಯತೆಗಳು ತಪ್ಪಾಗುತ್ತಿವೆ. ನಾವು ನಮ್ಮ ಆದ್ಯತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನದ ಅನುಚ್ಛೇದ 21ರ ಬಗ್ಗೆ ನಾವು ತಿಳಿಯಬೇಕಿದೆ. ಜನರಿಗೆ ಕುಡಿಯಲು ಶುದ್ಧ ನೀರು ಇಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಅಂಥದ್ದರಲ್ಲಿ ನಿಮಗೆ ಸೈಕಲ್ ಟ್ರ್ಯಾಕ್ ಬೇಕೇ?" ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಪ್ರಶ್ನಿಸಿತು.
ದೇಶಾದ್ಯಂತ ಸೈಕ್ಲಿಂಗ್ ಟ್ರ್ಯಾಕ್‌ಗಳನ್ನು ನಿರ್ಮಿಸಬೇಕೆಂದು ಕೋರಿ ಸೈಕ್ಲಿಂಗ್ ಪ್ರವರ್ತಕ ದವೀಂದರ್ ಸಿಂಗ್ ನಾಗಿ ಎಂಬವರು ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ನ ಒಂದು ಗೇಟಿನ ಹೊರಗಡೆ ಸೈಕಲ್ ಇದೆ ಎಂಬುದನ್ನು ಅರ್ಜಿದಾರರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಎಲ್ಲರಿಗೂ ಆಹಾರ ಭದ್ರತೆ ನೀಡಲು ತ್ವರಿತವಾಗಿ ಜನಗಣತಿ ನಡೆಸಿ: ಕೇಂದ್ರಕ್ಕೆ ಸೋನಿಯಾ ಗಾಂಧಿ ಒತ್ತಾಯ - POPULATION CENSUS