ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ಬಿಗ್ ಬ್ಯಾಷ್ ಲೀಗ್ನಲ್ಲಿ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಜಾಕೋಬ್ ಬೆಥೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಫಾರ್ಮ್ಗೆ ಮರಳಿದ್ದಾರೆ.
ಇಂದು ಹೋಬರ್ಟ್ ಹರಿಕೇನ್ಸ್ ಮತ್ತು ಮೇಲ್ಬೋರ್ನ್ ರೆನೆಗೇಡ್ಸ್ ನಡುವೆ ಬಿಗ್ ಬ್ಯಾಷ್ ಲೀಗ್ನ 34ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮೇಲ್ಬೋರ್ನ್ ರೆನಿಗೇಡ್ಸ್ 7 ವಿಕೆಟ್ ನಷ್ಟಕ್ಕೆ 154 ರನ್ ಕಲೆ ಹಾಕಿತು. ಆದರೇ ಆರಂಭದಲ್ಲಿ 23 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಬ್ಯಾಟರ್ಗಳಾದ ಜೋಶ್ ಬ್ರೌನ್ (6), ಹ್ಯಾರಿಸ್ (1), ಜೇಕ್ ಫ್ರೇಸರ್ ಮೆಕ್ಗುರ್ಕ್ (7) ಎರಡಂಕಿ ತಲುಪಲು ಸಾಧ್ಯವಾಗದೇ ಪೆವಿಲಿಯನ್ ಸೇರಿದ್ದರು. ಇದರಿಂದಾಗಿ ತಂಡ 100 ರನ್ಗಳ ಗಡಿ ತಲುಪುವುದು ಡೌಟ್ ಎಂದೇ ಭಾವಿಸಲಾಗಿತ್ತು.
ಈ ವೇಳೆ, ಬ್ಯಾಟಿಂಗ್ಗೆ ಆಗಮಿಸಿದ ಜಾಕೋಬ್ ಬೆಥೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರ್ಣಗೊಳಿಸಿದರು. 50 ಎಸೆತಗಳಲ್ಲಿ 87 ರನ್ಗಳನ್ನು ಚಚ್ಚಿದರು. ಇದರಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದವು. ಇವರು ಬ್ಯಾಟಿಂಗ್ ನೆರವಿನಿಂದ ರೆನಿಗೇಡ್ಸ್ ತಂಡ 150ರ ಗಡಿ ದಾಟಲು ಸಾಧ್ಯವಾಯ್ತು. ಬೆಥೆಲ್ ಹೊರತುಪಡಿಸಿ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದರಿಂದಾಗಿ ರೆನಿಗೇಡ್ಸ್ ತಂಡ ಈ ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋಲನುಭವಿಸಿತು.