ಬೆಂಗಳೂರು: ಐಟಿ-ಬಿಟಿ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ಬಯೋ ಇನೋವೇಷನ್ ಸೆಂಟರ್ (ಬಿಬಿಸಿ)ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯ ಬಿಹೆಚ್‌ಎಲ್ ಜಂಕ್ಷನ್ ಸಮೀಪದಲ್ಲಿರುವ ಬಿಬಿಸಿಯಲ್ಲಿ ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಸೆಂಟರ್‌ನಲ್ಲಿ ಯಾರೂ ಇರದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡದ 2ನೇ ಮಹಡಿಯಲ್ಲಿ ಬಿಬಿಸಿ ಕಾರ್ಯ ನಿರ್ವಹಿಸುತ್ತಿದೆ. ಬೆಳಗ್ಗೆ 5 ಗಂಟೆಗೆ ಸೆಂಟರ್‌ನ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್‌ಗಳು ಅಗ್ನಿ ಶಾಮಕ ನಿಯಂತ್ರಣ ಕೊಠಡಿಗೆ ಕೂಡಲೇ ಮಾಹಿತಿ ನೀಡಿದ್ದಾರೆ. ಬಿಬಿಸಿಯ ಸೆಂಟರ್‌ನಲ್ಲಿ ಸುಮಾರು 12 ಸಂಶೋಧನಾ ಪ್ರಯೋಗಾಲಯಗಳಿದ್ದು, ಇಲ್ಲಿ ಜೀವ ವಿಜ್ಞಾನ, ಆರೋಗ್ಯ, ಔಷಧಿ, ಜೈವಿಕ ಔಷಧಿ, ಕೃಷಿ, ಆಹಾರ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಜೈವಿಕ ಪರಿಸರ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತವೆ. ಹೀಗಾಗಿ ಪ್ರಯೋಗಾಲಯಗಳಲ್ಲಿ ವಿವಿಧ ರಾಸಾಯನಿಕ ದ್ರಾವಣ, ವಸ್ತುಗಳು, ಉಪಕರಣಗಳು, ಮಾದರಿಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದುದರಿಂದ ಸಮಯ ಕಳೆದಂತೆ ಕಟ್ಟಡದಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಗಿದೆ. ಆರಂಭದಲ್ಲಿ ಬೆಂಕಿ ತಹಬದಿಗೆ ತರುವುದು ಕಷ್ಟವಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸತತ ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದರು.
ಅಂದಾಜು 150 ಕೋಟಿ ರೂ. ಅಧಿಕ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ಹೇಳಲಾಗಿದೆ. ಆದರೆ, ಸ್ಪಷ್ಟತೆ ಇಲ್ಲ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ಮಾಹಿತಿ ನೀಡಿದರು. ಕೆಮಿಕಲ್ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಉದ್ಯಮಿಗಳ ವರ್ಷಗಳ ಕಠಿಣ ಪರಿಶ್ರಮವು ಸುಟ್ಟು ಬೂದಿಯಾಗಿರುವುದನ್ನು ನೋಡುವುದು ತುಂಬಾ ನೋವಾಗಿದೆ. ನಾವು ಅವರ ಜೊತೆ ನಿಲ್ಲುತ್ತೇವೆ. ಸರ್ಕಾರ ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತದೆ. ಕೂಡಲೇ ಸ್ಪಂದಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಕ್ಕೆ ನನ್ನ ಕೃತಜ್ಞತೆಗಳು ಎಂದು ಹೇಳಿದರು.
ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24ರಂದು ಸರಳ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ