ಬೆಂಗಳೂರು: ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯನಿಂದ ಶಿವಲಿಂಗ ಸ್ಪರ್ಶದ ಕೌತುಕ ಕಣ್ತುಂಬಿಕೊಳ್ಳಲು ಬಂದ ಭಕ್ತರಿಗೆ ನಿರಾಸೆಯಾಗಿದೆ. ಮೋಡ ಕವಿದಿದ್ದರಿಂದ ಇತಿಹಾಸದಲ್ಲೇ 2ನೇ ಬಾರಿಗೆ ಸೂರ್ಯ ರಶ್ಮಿ ಶಿವಲಿಂಗದ ಸ್ಪರ್ಶ ಮಾಡಿಲ್ಲ. ಪ್ರತಿ ಮಕರ ಸಂಕ್ರಾಂತಿ ದಿನ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗದ ಮೇಲೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ. ಆದರೆ, ಈ ಬಾರಿ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿಲ್ಲ.
ಗವಿಗಾಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಪ್ರತಿಕ್ರಿಯಿಸಿ, "ಸಂಜೆ 5:20 ರಿಂದ 5:23ರ ಸುಮಾರಿಗೆ ದೇಗುಲ ಬಲಭಾಗದ ಕಮಾನಿನಿಂದ ಕಿಟಕಿಯ ಮೂಲಕ ಪ್ರವೇಶಿಸಬೇಕಿದ್ದ ಸೂರ್ಯ ರಶ್ಮಿ ಮೋಡ ಕವಿದಿದ್ದರಿಂದ ಗೋಚರವಾಗಿಲ್ಲ. ಇದರಿಂದ ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯುಂಟಾಗಿದೆ. ಶಿವಲಿಂಗಕ್ಕೆ ಸೂರ್ಯನ ಪೂಜೆ ನಡೆದಿದೆ. ಈಶ್ವರನ ಅನುಗ್ರಹ ನಾಳೆಯಿಂದ ಎಲ್ಲರಿಗೂ ಸಿಗುತ್ತದೆ. ಸೂರ್ಯರಶ್ಮಿಯು ಖಂಡಿತವಾಗಿಯೂ ಶಿವಲಿಂಗವನ್ನ ಸ್ಪರ್ಶಿಸಿದೆ. ಆದರೆ, ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿಯ ಸ್ಪರ್ಶವಾಗಿದೆ ಎಂದು ತಿಳಿದಿಲ್ಲ. ಪ್ರಸಕ್ತ ವರ್ಷದಲ್ಲಿ ಯಾವುದೇ ಕೆಡುಕುಗಳು ಉಂಟಾಗುವುದಿಲ್ಲ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಳ್ಳೇಗಾಲ: ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ವಿಧ್ಯುಕ್ತ ಚಾಲನೆ; ಉತ್ತರ ದಿಕ್ಕಿಗೆ ವಾಲಿದ ಚಂದ್ರಮಂಡಲ
ಇದನ್ನೂ ಓದಿ: ಹಾವೇರಿಯ ತೋಪಿನ ದುರ್ಗಾದೇವಿಗಿಲ್ಲ ಪ್ರಾಣಿ ಬಲಿ: ಇಲ್ಲಿ ಹಣ್ಣುಕಾಯಿಯೇ ನೈವೇದ್ಯ