Coach Gautam Gambhir: ರಾಹುಲ್ ದ್ರಾವಿಡ್ ಬಳಿಕ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ ಗೊಂಡಿರುವುದು ಗೊತ್ತೆ ಇದೆ. ಆದರೆ ಇವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದರ ಬೆನ್ನಲ್ಲೇ ಗಂಭೀರ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿ ನೂತನ ಕೋಚ್ ನೇಮಕ ಮಾಡುವಂತೆ ಕೂಗುಗಳು ಕೇಳಿಬರುತ್ತಿವೆ.
ಕಳೆದ ವರ್ಷ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಗಂಭೀರ್ ಕೂಡ ದ್ರಾವಿಡ್ರಂತೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಇವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಹೀನಾಯವಾಗಿ ಸೋಲನುಭವಿಸಿತು.
ಬಳಿಕ ನ್ಯೂಜಿಲೆಂಡ್ ಟೆಸ್ಟ್ ಸರಣಿ ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಟೀಂ ಇಂಡಿಯಾ ಹೀನಾಯವಾಗಿ ಸೋಲನ್ನು ಕಂಡಿತು. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ ನಿಂದ ಹೊರಬಿತ್ತು. ಸಾಲು ಸಾಲು ಸೋಲಿನ ಬಳಿಕ ಕೋಚ್ ಗಂಭೀರ್ ಮೇಲೆ ಒತ್ತಡವೂ ಹೆಚ್ಚಾಗಿದ್ದು ಅವರನ್ನು ತೆಗೆದು ಹಾಕುವಂತೆ ಕೂಗುಗಳು ಕೇಳಿಬಂದಿವೆ.
ಇದರ ನಡುವೆ ಕಾಮೆಂಟೆಟರ್ ಮತ್ತು ಟೀಂ ಇಂಡಿಯಾದ ಮಾಜಿ ಆಟಗಾರನಾಗಿರುವ ಆಕಾಶ್ ಚೋಪ್ರಾ, ಗಂಭೀರ್ ಅವರ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೇಲೆ ಗಂಭೀರ್ ಅವರ ಭವಿಷ್ಯ ಅವಲಂಭಿಸಿದೆ. ಒಂದು ವೇಳೆ ಇಲ್ಲಿ ಭಾರತ ತಂಡ ವಿಫಲವಾದರೆ ಗಂಭೀರ್ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ಯೂಟ್ಯೂಬ್ ಚಾನಲ್ನಲ್ಲಿ ಆಕಾಶ್ ಚೋಪ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿವರೆಗೂ ಬಿಸಿಸಿಐ ಗಂಭೀರ್ ಅವರನ್ನು ಕೋಚ್ ಅಗಿ ಮುಂದುವರಿಸಬಹುದು. ಏಕೆಂದರೆ ಪ್ರತಿಯೊಬ್ಬರ ಕಾರ್ಯಕ್ಷಮತೆ ಪರಿಶೀಲಿಸಲು ಕನಿಷ್ಠ ಒಂದು ವರ್ಷವಾದರೂ ಸಮಯ ಬೇಕಾಗುತ್ತದೆ. ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆಗೆ ಗೌತಮ್ ಗಂಭೀರ್ ಅವರು ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಳ್ಳಲಿದೆ. ಒಂದು ವೇಳೆ ಈ ಸರಣಿಯನ್ನೂ ಭಾರತ ಕಳೆದುಕೊಂಡರೆ, ಕೋಚ್ ಆಗಿ ಇದು ಅವರ ಕೊನೆಯ ಸರಣಿಯಾಗಬಹುದು ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ತಂಡದ ಗೆಲುವಿಗಾಗಿ ಗಂಭೀರ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದಾಗ್ಯೂ, ಗಂಭೀರ್ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿದೆ.
ಇದನ್ನೂ ಓದಿ: 73 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ದೊಡ್ಡ ದಾಖಲೆ ಬರೆದ ಪಾಕ್ ಬೌಲರ್!