ವಿಜಯನಗರ: "ಗಾಲಿ ಜನಾರ್ದನ ರೆಡ್ಡಿ ಏನು ಬುದ್ಧಿವಂತನಾ? ಅರವತ್ತು ಎಪ್ಪತ್ತು ವರ್ಷಗಳ ಹಿಂದೆಯೇ ಹುಟ್ಟಿದ್ದರಾ ? ಮಾಜಿ ಸಚಿವ ಶ್ರೀರಾಮಲುಗೆ ಹೇಳೊಕೆ ಇವರ್ಯಾರು?" ಎಂದು ವಾಲ್ಮೀಕಿ ಸಮುದಾಯದ ಮುಖಂಡ ಜಂಬಯ್ಯ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ, ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.
ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಸಮುದಾಯದ ನೂರಾರು ಜನರು, ರೆಡ್ಡಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಟೈರ್ಗೆ ನೀರು ಹಾಕಿ ಬೆಂಕಿ ಆರಿಸಲು ಬಂದ ಪೊಲೀಸರನ್ನು ಪ್ರತಿಭಟನಾಕಾರರು ತಡೆದರು. ಈ ವೇಳೆ ವಾಗ್ವಾದ ಕೂಡಾ ನಡೆಯಿತು.
ಬಳಿಕ ವಾಲ್ಮೀಕಿ ವೃತ್ತದಿಂದ ಎಸ್ಪಿ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿ ಎಎಸ್ಪಿ ಸಲೀಂ ಪಾಷಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜನಾರ್ದನ ರೆಡ್ಡಿ ಅವರು ಈ ಹಿಂದೆ ಇಬ್ಬರು ಜತೆಯಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿ, ಈಗ ನಾನೇ ಶ್ರೀ ರಾಮುಲು ಅವರನ್ನು ಬೆಳೆಸಿದ್ದು ಅಂತ ಹೇಳಿ ಅವಮಾನ ಮಾಡಿದ್ದಾರೆ. ಅವಹೇಳನಕಾರಿ ಹೇಳಿಕೆ ನೀಡಿದ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಿಜಯನಗರ ಜಿಲ್ಲೆಯ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಾನು ಯಾರದೋ ಒಬ್ಬರ ಆಶೀರ್ವಾದದಿಂದ ಬೆಳೆದಿಲ್ಲ, ನಮ್ಮದೂ ರಾಜಕೀಯ ಕುಟುಂಬ: ಜನಾರ್ದನ ರೆಡ್ಡಿ ಹೇಳಿಕೆ ಸರಿಯಲ್ಲ: ಶ್ರೀರಾಮುಲು