ಬೆಂಗಳೂರು: "ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳದ ಪ್ರಕರಣಗಳು ಬೆಂಗಳೂರಿನಲ್ಲಿ ಇದುವರೆಗೂ ವರದಿಯಾಗಿಲ್ಲ. ಅಂತಹ ಪ್ರಕರಣಗಳು ವರದಿಯಾದರೆ ಸೂಕ್ತ ಸ್ಪಂದನೆ ನೀಡುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಕಿರುಕುಳದ ಪ್ರಕರಣಗಳು ರಾಜ್ಯದ ವಿವಿಧೆಡೆ ವರದಿಯಾಗಿವೆ. ಆದ್ದರಿಂದ ಕೆಲವು ಗೈಡ್ ಲೈನ್ಸ್ ಜಾರಿಗೊಳಿಸುವುದರ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆಗಳು ನಡೆದಿವೆ. ಅವುಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ" ಎಂದು ಹೇಳಿದರು. ಅಲ್ಲದೇ ಮೀಟರ್ ಬಡ್ಡಿ ದಂಧೆಯ ವಿರುದ್ಧವೂ ಈಗಾಗಲೇ ಕೋ ಆಪರೇಟಿವ್ ಸೊಸೈಟಿಗಳ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಪೊಲೀಸರಿಗೆ ವಿಶೇಷ ಅಧಿಕಾರ - ಗೃಹ ಸಚಿವ ಪರಮೇಶ್ವರ್: ಮೈಕ್ರೋ ಫೈನಾನ್ಸ್ನವರಿಂದ ಬಡವರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು, ಕಾನೂನು ರಚಿಸುವ ಸಲುವಾಗಿ ರಾಜ್ಯಪಾಲರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೋಮವಾರ ತಿಳಿಸಿದ್ದರು.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಮೈಕ್ರೋ ಫೈನಾನ್ಸ್ ಕುರಿತು ಸಿಎಂ, ಡಿಸಿಎಂ, ಕಾನೂನು ಸಚಿವರು ಹಾಗೂ ನಾನು ಚರ್ಚೆ ಮಾಡಿದ್ದೇವೆ. ಆರ್ಬಿಐ ಪ್ರತಿನಿಧಿಗಳು, ಮೈಕ್ರೋ ಫೈನಾನ್ಸ್ ಪ್ರತಿನಿಧಿ, ಪೊಲೀಸ್ ಇಲಾಖೆ, ರೆವೆನ್ಯೂ ಇಲಾಖೆ, ಹಣಕಾಸಿನ ಇಲಾಖೆಯವರೆಲ್ಲರೂ ಕುಳಿತು ಮಾತನಾಡಿದ್ದೇವೆ. ಸಿಎಂ ರಿವ್ಯೂ ಮಾಡುವಾಗ ಒಂದು ತೀರ್ಮಾನಕ್ಕೆ ಬಂದರು. ಅದರಲ್ಲಿ ಈಗಾಗಲೇ ಇರುವಂತಹ ಕಾನೂನನ್ನ ಭದ್ರ ಮಾಡುವಂತಹದ್ದು ಮತ್ತು ಹೊಸದಾಗಿ ಏನಾದ್ರು ಪ್ರಾವಿಜನ್ಅನ್ನ ಸೇರಿಸುವುದರ ಕುರಿತು ಚರ್ಚಿಸಿದ್ದೇವೆ ಎಂದು ಹೇಳಿದ್ದರು.
ಆರ್ಬಿಐ ನಿಯಮಗಳಿವೆ: ಲೆಂಡಿಂಗ್ ಮಾಡುವವರಿಗೆ, ರಿಕವರಿ ಮಾಡುವವರಿಗೆ ಹಾಗೂ ಬೆನಿಫಿಷಿಯರಿಗೆ ತೊಂದರೆ ಮಾಡದಂತೆ ಆರ್ಬಿಐ ಗೈಡ್ಲೈನ್ಸ್ಗಳಿವೆ. ಅದರಲ್ಲಿ, 6 ಗಂಟೆ ಮೇಲೆ ಹಣ ರಿಕವರಿ ಮಾಡಬಾರದು ಅಂತ ಇದೆ. ಅವಾಚ್ಯ ಶಬ್ದ ಬಳಕೆ ಮಾಡಬಾರದು. ಮನೆಗಳ ಮೇಲೆ ದಾಳಿ ಮಾಡಬಾರದು, ಅವರ ವಸ್ತುಗಳನ್ನ ಹೊತ್ತೊಯ್ಯಬಾರದು ಅಂತ ಇದೆ. ಅದನ್ನು ಪಾಲಿಸಬೇಕು ಅಂತ ನಾವು ಹೇಳಿದ್ದೇವೆ. ಅದಕ್ಕೆ ಕಾನೂನು ಏನಾದ್ರು ಬದಲಾವಣೆ ಮಾಡುವುದಿದ್ರೆ ಅದನ್ನ ನಾವು ಮಾಡುತ್ತೇವೆ. ಹೊಸದಾಗಿ ತರಬೇಕಾದ ಕಾನೂನನ್ನ ಆರ್ಡಿನೆನ್ಸ್ ಮೂಲಕ ತರಬೇಕು ಅಂದುಕೊಂಡಿದ್ದೇವೆ. ಇನ್ನೊಂದು ವಾರದಲ್ಲಿ ಆರ್ಡಿನೆನ್ಸ್ ಮಾಡಿ ಕ್ಯಾಬಿನೆಟ್ನಲ್ಲಿ ಅಪ್ರೂವಲ್ ಪಡೆದು ಗವರ್ನರ್ಗೆ ಕಳುಹಿಸಿಕೊಡುತ್ತೇವೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಆತ್ಮಹತ್ಯೆ ಆರೋಪ ಪ್ರಕರಣ: ತುಂಗಭದ್ರಾ ನದಿಯಲ್ಲಿ ಶವ ಪತ್ತೆ
ಇದನ್ನೂ ಓದಿ: ಮೈಸೂರು: ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ