ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಯ್ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ ಸೇರಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಟ ತಮ್ಮ 76ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಸರಿಗಮ ವಿಜಯ್ ಅವರ ನಿಧನವನ್ನು ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಸರಿಗಮ ವಿಜಯ್ ಹೆಸರು ಬಂದಿದ್ದು ಹೇಗೆ ? 'ಸಂಸಾರದಲ್ಲಿ ಸರಿಗಮ' ಎಂಬ ನಾಟಕವನ್ನು ಇವರು ನಿರ್ದೇಶಿಸಿ, ನಟಿಸಿದ್ದಾರೆ. ಈ ನಾಟಕ ದೇಶಾದ್ಯಂತ 1,300ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿದೆ. ಆರ್ ವಿಜಯ್ ಕುಮಾರ್ ಇವರ ಮೂಲ ಹೆಸರು. ಆದರೆ ಈ ನಾಟಕದಿಂದ ಹೆಚ್ಚಿನ ಜನಪ್ರಿಯತೆ ಸಂಪಾದಿಸಿದ ಬಳಿಕ ಸರಿಗಮ ವಿಜಯ್ ಎಂದು ಗುರುತಿಸಿಕೊಂಡರು.
ಮಹಾಲಕ್ಷ್ಮೀ ಲೇಔಟ್ನ ನಿವಾಸದಲ್ಲಿ ಇವರು ವಾಸಿಸುತ್ತಿದ್ದರು. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ತಂಗಿ ಮೋಕ್ಷಿತಾ ಬಳಿ ಕ್ಷಮೆಯಾಚಿಸಿದ ಮಂಜಣ್ಣ: ಸ್ಪರ್ಧಿಗಳ ಮಾತು ಮನದಾಳವೇ ಅಥವಾ ಪ್ರೇಕ್ಷಕರನ್ನು ಸೆಳೆಯುವ ತಂತ್ರವೇ?
ರಂಗಭೂಮಿ ಮತ್ತು ಕಿರುತೆರೆ, ಹಿರಿತೆರೆಯಲ್ಲಿ ಸರಿಗಮ ವಿಜಯ್ ಹೆಸರು ಮಾಡಿದ್ದಾರೆ. 1975ರ ಸಂದರ್ಭ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಜಯ್ ಈವರೆಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 80 ಚಿತ್ರಗಳಲ್ಲಿ ಸಹ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಬೆಳುವಲದ ಮಡಿ ಎಂಬುದು ಇವರ ಮೊದಲ ಚಿತ್ರ. ಹಾಸ್ಯ ನಟನೆ, ಪೋಷಕ ನಟನಾಗಿ ತಮ್ಮದೇ ಆದ ಜನಪ್ರಿಯತೆ ಸಂಪಾದಿಸಿದ್ದರು. ಸದ್ಯ ಇಹಲೋಕ ತ್ಯಜಿಸಿದ್ದು, ಕುಟುಂಬ ಕಣ್ಣೀರಿನಲ್ಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತವಾಗುತ್ತಿದೆ.
ವಿಜಯೇಂದ್ರ ಸಂತಾಪ: ಸರಿಗಮ ವಿಜಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ವಿಜಿ ಅವರದ್ದು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು ಗಳಿಸಿತ್ತು. ಇದೇ ಕಾರಣಕ್ಕೆ ಅವರಿಗೆ ಸರಿಗಮ ವಿಜಿ ಹೆಸರು ಬಂದಿತ್ತು. ನಾಟಕದಿಂದ ಸಿನಿಮಾಕ್ಕೆ ಪದಾರ್ಪಣೆ ಮಾಡಿದ ವಿಜಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರ ಕೆಲವೆಡೆ ವಿಲನ್ ಪಾತ್ರಗಳಲ್ಲಿಯೂ ನಟಿಸಿದ್ದರು ಎಂದಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ ರೈ ವಿರುದ್ಧದ ಸ್ಪರ್ಧೆಯಿಂದ ಆಧ್ಯಾತ್ಮಿಕತೆವರೆಗೆ: ನಟನೆ ತೊರೆದು ಸನ್ಯಾಸಿಯಾದ ಈ ನಟಿ ಬಗ್ಗೆ ನಿಮಗೆಷ್ಟು ಗೊತ್ತು?