ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಅವರು ಕೊಟ್ಟ ಮಾತಿನಂತೆ ಕಾಟನ್ ಪೇಟೆ ವ್ಯಾಪ್ತಿಯ ಹಸುಗಳ ಮಾಲೀಕರ ಕುಟುಂಬಕ್ಕೆ ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸುಗಳನ್ನು ಕೊಡಿಸಿದ್ದಾರೆ.
ಕಾಟನ್ ಪೇಟೆ ವ್ಯಾಪ್ತಿಯ ವಿನಾಯಕ ನಗರದಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಘಟನೆ ನಡೆದ ಬಳಿಕ ಸ್ಥಳಕ್ಕೆ ಸಚಿವ ಜಮೀರ್ ಅಹಮದ್ ಭೇಟಿ ನೀಡಿ, ಮೂರು ಹಸುಗಳನ್ನು ಕೊಡಿಸುವುದಾಗಿ ಮಾಲೀಕರಿಗೆ ಮಾತು ಕೊಟ್ಟಿದ್ದರು. ಅದರಂತೆ ಇಂದು ಹಸುಗಳ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಇಂದು ಹಸುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮುದಾ, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿಯೂ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜೊತೆಗಿದ್ದೇವೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಸುಗಳ ಕೆಚ್ಚಲು ಕೊಯ್ದಿರುವುದು ಅನಾಗರಿಕ ಕೃತ್ಯ, ಪ್ರಕರಣದ ತನಿಖೆ ಮುಂದುವರೆದಿದೆ - ಪೊಲೀಸ್ ಆಯುಕ್ತ ಬಿ.ದಯಾನಂದ್
ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಒಂದು ಅನಾಗರಿಕ ಕೃತ್ಯವಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಊಹಾಪೋಹಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಕೃತ್ಯವನ್ನ ಮನುಷ್ಯನೇ ಎಸಗಿರುವುದರಿಂದ ಮೃಗೀಯ ಎನ್ನಲು ಸಹ ಸಾಧ್ಯವಿಲ್ಲ, ಈಗಾಗಲೇ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನ ಬಂಧಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆಯನ್ನ ಮುಂದುವರೆಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಘಟನೆ ಹಿನ್ನೆಲೆ: ರಸ್ತೆ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿತ್ತು. ಹಸುಗಳ ಮಾಲೀಕ ಕರ್ಣ ನೀಡಿದ ದೂರಿನ ಅನ್ವಯ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 325 (ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಠಾಣೆ ಪೊಲೀಸರು, ಬಿಹಾರ ಮೂಲದ ಶೇಕ್ ನಸ್ರು (30) ಎಂಬಾತನನ್ನ ಬಂಧಿಸಿದ್ದರು.
ಹಸುಗಳ ಮೇಲಿನ ಅಮಾನವೀಯ ಮತ್ತು ಹೇಯ ಕೃತ್ಯವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಜೊತೆಗೆ ಹಸುಗಳ ಮಾಲೀಕರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು 1 ಲಕ್ಷ ರೂ ಪರಿಹಾರ ಘೋಷಿಸಿದ್ದರು.
ಇದನ್ನೂ ಓದಿ: ಹಸು ಮಾಲೀಕನಿಗೆ 1 ಲಕ್ಷ ರೂ ಪರಿಹಾರ ಕೊಟ್ಟ ಆರ್.ಅಶೋಕ್: ಗೋ ಪೂಜೆ ನೆರವೇರಿಸಿದ ಬಿ.ವೈ. ವಿಜಯೇಂದ್ರ
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಪಾಪಿಗಳು! ರಸ್ತೆಯಲ್ಲಿ ರಕ್ತದೋಕುಳಿ, ಮೂಕಪ್ರಾಣಿಗಳ ನರಳಾಟಕ್ಕೆ ಸ್ಥಳೀಯರ ಕಣ್ಣೀರು