ನವದೆಹಲಿ: ಭಾರತದ ಆಟೋಮೊಬೈಲ್ ವಲಯದ ವಾಹನಗಳ ಮಾರಾಟವು 2024ರಲ್ಲಿ ಶೇ 11.6ರಷ್ಟು ಏರಿಕೆಯಾಗಿದ್ದು, ವಾಹನಗಳ ಒಟ್ಟು ಮಾರಾಟ ಸಂಖ್ಯೆ 2.5 ಕೋಟಿಯ ಗರಿಷ್ಠ ಮಟ್ಟ ತಲುಪಿದೆ. ಅದಕ್ಕೂ ಹಿಂದಿನ ವರ್ಷದಲ್ಲಿ ಈ ಸಂಖ್ಯೆ 2.3 ಕೋಟಿ ಯುನಿಟ್ಗಳಾಗಿತ್ತು ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ಮಂಗಳವಾರ ಬಿಡುಗಡೆ ಮಾಡಿದ ಸಗಟು ಅಂಕಿ - ಅಂಶಗಳು ತಿಳಿಸಿವೆ. ಇದರೊಂದಿಗೆ, ಭಾರತವು ಕಳೆದ ವರ್ಷದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಯಾಗಿ ಮುಂದುವರೆದಿದೆ.
ವಾಹನಗಳ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳ: "ಗ್ರಾಹಕರ ಸಕಾರಾತ್ಮಕ ಭಾವನೆಗಳು ಮತ್ತು ದೇಶದ ಸ್ಥೂಲ ಆರ್ಥಿಕ ಸ್ಥಿರತೆಯು ಆಟೋಮೊಬೈಲ್ ಕ್ಷೇತ್ರದಲ್ಲಿ ವಾಹನಗಳ ಮಾರಾಟ ಸಂಖ್ಯೆಯ ಹೆಚ್ಚಳಕ್ಕೆ ಸಹಾಯ ಮಾಡಿದೆ" ಎಂದು ಸಿಯಾಮ್ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಶೇಕಡಾ 14.5 ರಷ್ಟು ಏರಿಕೆಯಾಗಿದ್ದು, 1.95 ಕೋಟಿ ಯುನಿಟ್ಗಳ ಮಾರಾಟ ದಾಖಲಿಸಿದೆ. ಇದಲ್ಲದೇ, ಪ್ರಯಾಣಿಕ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಮಾರಾಟ ದಾಖಲಿಸಿವೆ ಎಂದು ಅವರು ತಿಳಿಸಿದರು.
ಪ್ರಯಾಣಿಕರ ವಾಹನ ಮಾರಾಟದಲ್ಲಿ ಪ್ರಗತಿ: ಇನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ ಪ್ರಯಾಣಿಕ ವಾಹನಗಳ (ಪಿವಿ) ಮಾರಾಟ ಶೇಕಡಾ 4.2 ರಷ್ಟು ಏರಿಕೆಯಾಗಿದ್ದು, ಈ ಸಂಖ್ಯೆ ಸುಮಾರು 43 ಲಕ್ಷ ಯುನಿಟ್ಗೆ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, 2024 ರಲ್ಲಿ ತ್ರಿಚಕ್ರ ವಾಹನಗಳ ಮಾರಾಟ ಶೇಕಡಾ 6.8 ರಷ್ಟು ಬೆಳವಣಿಗೆ ದಾಖಲಿಸಿದ್ದು, 7.3 ಲಕ್ಷ ಯುನಿಟ್ ಮಾರಾಟವಾಗಿವೆ.
ಡಿಸೆಂಬರ್ನ ಅಂಕಿ - ಅಂಶಗಳ ಪ್ರಕಾರ, ಡೀಲರ್ಗಳಿಗೆ ಪ್ರಯಾಣಿಕ ವಾಹನಗಳ ಪೂರೈಕೆಯು 2023ರ ಡಿಸೆಂಬರ್ನಲ್ಲಿ ಇದ್ದ 2,86,390 ಯುನಿಟ್ಗಳಿಂದ ಶೇಕಡಾ 10 ರಷ್ಟು ಏರಿಕೆಯಾಗಿ 3,14,934ಕ್ಕೆ ತಲುಪಿದೆ.
ದ್ವಿಚಕ್ರ ವಾಹನಗಳ ಪೂರೈಕೆಯಲ್ಲಿ ಶೇ 9 ರಷ್ಟು ಕುಸಿತ: ಆದಾಗ್ಯೂ, ದ್ವಿಚಕ್ರ ವಾಹನಗಳ ಪೂರೈಕೆಯು 2023ರ ಡಿಸೆಂಬರ್ನಲ್ಲಿ ಇದ್ದ 12,12,238 ಯುನಿಟ್ಗಳಿಗೆ ಹೋಲಿಸಿದರೆ ಶೇಕಡಾ 9 ರಷ್ಟು ಕುಸಿತ ಕಂಡು 11,05,565 ಕ್ಕೆ ತಲುಪಿದೆ. ತ್ರಿಚಕ್ರ ವಾಹನಗಳ ಮಾರಾಟವು 2023 ರ ಡಿಸೆಂಬರ್ನಲ್ಲಿ ಇದ್ದ 50,947 ಯುನಿಟ್ಗಳಿಂದ 2024ರ ಡಿಸೆಂಬರ್ನಲ್ಲಿ 52,733 ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಸಿಯಾಮ್ ತಿಳಿಸಿದೆ. ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಅತ್ಯಧಿಕ ಬೆಳವಣಿಗೆ ದಾಖಲಾಗಿದೆ.
ಇದನ್ನೂ ಓದಿ : ಕ್ರೆಡಿಟ್ ಸ್ಕೋರ್, RBI ನಿಂದ ಹೊಸ ನಿಯಮ: ಇನ್ನು ಹಾಗೆ ಮಾಡುವುದು ಕಷ್ಟ - CREDIT SCORE NEW RULES