ಹಾವೇರಿ: ಸಾಮಾನ್ಯವಾಗಿ ಭಕ್ತರು ಸ್ವಾಮೀಜಿಗಳಿದ್ದಲ್ಲಿಗೆ ಹೋಗಿ ಪ್ರಸಾದ ಪಡೆಯುವುದು ವಾಡಿಕೆ. ಆದರೆ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ನಡೆಯೋ ಗುದ್ದಲೀಶ್ವರ ಮಠದ ಜಾತ್ರೆಯಲ್ಲಿ ಸ್ವಾಮೀಜಿಯೇ ಭಕ್ತರಿದ್ದಲ್ಲಿಗೆ ಹೋಗಿ ಪ್ರಸಾದ ನೀಡುತ್ತಾರೆ.
ಹೌದು, ಹೊಸರಿತ್ತಿ ಗ್ರಾಮದ ಗುದ್ದಲೀಶ್ವರ ಮಠದಲ್ಲಿ 125 ವರ್ಷಗಳಿಂದ ಗುದ್ದಲೀಶ್ವರ ಜಾತ್ರೆ ಆಚರಿಸಲಾಗುತ್ತಿದೆ. ಐದು ದಿನಗಳ ಕಾಲ ಸಂಭ್ರಮದಿಂದ ಜಾತ್ರೆ ನಡೆಯುತ್ತದೆ. ಜಾತ್ರೆ ಪ್ರಯುಕ್ತ ಮಠದ ಸ್ವಾಮೀಜಿ ಕುದುರೆ ಮೇಲೆ ಕುಳಿತು ಭಕ್ತರು ಇರುವಲ್ಲಿಗೆ ಹೋಗಿ ಪ್ರಸಾದ ವಿತರಣೆ ಮಾಡುತ್ತಾರೆ. ಮಠ ಆರಂಭವಾದಾಗಿನಿಂದ ಜಾತ್ರೆಯಲ್ಲಿ ಈ ಪದ್ದತಿ ರೂಢಿಯಲ್ಲಿದೆ.
ಸಂಕ್ರಾಂತಿ ದಿನ ಪ್ರಸಾದ ವಿತರಣೆ: ಸಂಕ್ರಾಂತಿ ಹಬ್ಬದ ದಿನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಠದ ಸ್ವಾಮೀಜಿ ಕುದುರೆ ಮೇಲೆ ಕುಳಿತು ಸವಾರಿ ಮಾಡುತ್ತಾ ಭಕ್ತರಿಗೆ ಕಬ್ಬು, ಬೆಲ್ಲ, ಕೊಬ್ಬರಿ ಪ್ರಸಾದವನ್ನು ನೀಡುತ್ತಾರೆ. ಹಾಗೆಯೆ ಮಂಗಳವಾರ ಸ್ವಾಮೀಜಿ ಪ್ರಸಾದ ವಿತರಿಸಿದರು.
ಭಕ್ತರಿಗೆ ಪ್ರಸಾದ ವಿತರಣೆಗೆಂದು ಒಂದು ಟ್ರ್ಯಾಕ್ಟರ್ನಷ್ಟು ಕಬ್ಬು ತಂದು ಕಟ್ ಮಾಡಲಾಗುತ್ತೆ. ಕಬ್ಬಿನ ಜೊತೆಗೆ ಕ್ವಿಂಟಲ್ಗಟ್ಟಲೇ ಬೆಲ್ಲ, ಕೊಬ್ಬರಿ, ಉತ್ತತ್ತಿ ಹಣ್ಣುಗಳನ್ನ ಸೇರಿಸಿ ಭಕ್ತರಿಗೆ ವಿತರಣೆ ಮಾಡಲಾಗುತ್ತೆ. ಕೇವಲ ಗ್ರಾಮದ ಜನ ಮಾತ್ರವಲ್ಲದೇ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಜಾತ್ರೆಗೆ ಬರುತ್ತಾರೆ. ಜಾತ್ರೆ ಪ್ರಯುಕ್ತ ಐದು ದಿನಗಳ ಕಾಲ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರಥೋತ್ಸವದ ಮರು ದಿನ ಭಕ್ತರು ಇದ್ದಲ್ಲಿಗೆ ಹೋಗಿ ಸ್ವಾಮೀಜಿ ಪ್ರಸಾದ ವಿತರಣೆ ಮಾಡುತ್ತಾರೆ. ಇದಕ್ಕೆ ಕಡುಬಿನ ಕಾಳಗ ಎಂತಲೂ ಕರೆಯುತ್ತಾರೆ.
ಜಾತ್ರೆ ಸಂದರ್ಭದಲ್ಲಿ ಮಠದ ಅಂಗಳ ಭಕ್ತರಿಂದ ತುಂಬಿ ತುಳುಕುತ್ತದೆ. ಜಾತಿ ಭೇದ ಮರೆತು ಸರ್ವಜನಾಂಗದ ಜನರು ಜಾತ್ರೆಗೆ ಆಗಮಿಸಿ ಸ್ವಾಮೀಜಿಗಳ ಪ್ರಸಾದ ಸ್ವೀಕರಿಸುತ್ತಾರೆ. ಸ್ವಾಮೀಜಿ ಕುದುರೆ ಮೇಲೆ ಕುಳಿತು ಪ್ರಸಾದ ವಿತರಣೆಗೆ ಸವಾರಿ ಹೊರಡೋ ವೇಳೆ ವಿವಿಧ ಜಾನಪದ ಕಲಾತಂಡಗಳ ಸದ್ದು ಮೊಳಗುತ್ತದೆ. ಸ್ವಾಮೀಜಿ ಕುಳಿತು ಸವಾರಿ ಹೊರಡಲು ಕುದುರೆಯನ್ನ ವಿಶೇಷವಾಗಿ ಅಲಂಕಾರ ಮಾಡಲಾಗುತ್ತೆ.
ಇದ್ದಲ್ಲಿಗೆ ಬಂದು ಭಕ್ತರಿಗೆ ಪ್ರಸಾದ ವಿತರಿಸಿ ಅವರ ಬಾಳು ಸಿಹಿಯಾಗಿರ್ಲಿ ಅಂತಾ ಹಾರೈಸೋ ಮಠದ ಸ್ವಾಮೀಜಿ, ಈ ಬಾರಿ ಟ್ರ್ಯಾಕ್ಟರ್ನಲ್ಲಿ ಕುಳಿತು ಭಕ್ತರಿಗೆ ಚಾಕೊಲೇಟ್ ಅನ್ನು ಸಹ ಎಸೆದು ಗಮನ ಸೆಳೆದರು.
ಗುದ್ದಲೀಶ್ವರ ಮಠದ ಗುದ್ದಲಿ ಶಿವಯೋಗೀಶ್ವರ ಶ್ರೀಗಳು ಮಾತನಾಡಿ, "ಸ್ವಾಮೀಜಿಗಳ ಹತ್ತಿರ ಹೋಗಿ ಆಶೀರ್ವಾದ, ಪ್ರಸಾದ ಸ್ವೀಕರಿಸುವುದು ಸಾಮಾನ್ಯ. ಇದೊಂದು ದಿನ ಸ್ವಾಮೀಜಿಗಳೇ ಭಕ್ತರಿದ್ದಲ್ಲಿಗೆ ಹೋಗಿ ಪ್ರಸಾದವನ್ನು ನೀಡುತ್ತಾರೆ. ಬೆಲ್ಲವನ್ನು ಎಸೆದಾಗ ಕೆಳಗೆ ಬಿದ್ದರೆ ಮಣ್ಣಾಗುತ್ತದೆ, ಕಬ್ಬನ್ನು ತೂರಿದಾಗ ಅದು ಕೆಳಗೆ ಬಿದ್ದರೂ ತೊಳೆದುಕೊಂಡು ತಿನ್ನಬಹುದು. ಕಬ್ಬಿನ ಚೂರಿನ ಕಾಳಗಕ್ಕೆ ಕಡುಬಿನ ಕಾಳಗ ಎಂದು ಹೆಸರು ಬಂತು. ಈಗ ಕಬ್ಬ ಬೇಕು ಅಂತಿಲ್ಲ ಚಾಕೊಲೇಟ್ಗಳನ್ನು ವಿತರಿಸಲಾಗುತ್ತದೆ. ಗುರುಗಳ ಹಸ್ತ ಮುಟ್ಟಿ ಬಂದಿರುವ ಆ ಪ್ರಸಾದವನ್ನು ಸಂಕಲ್ಪದಿಂದ ಯಾರು ಹಿಡಿಕೊಳ್ಳುತ್ತಾರೋ ಅವರು ನನ್ನ ಸಂಕಲ್ಪ ಸಿದ್ಧಿಸಿದೆ ಎಂದು ಮರು ವರ್ಷ ಬಂದು ಹೇಳುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: 5 ಮಂಗಳವಾರ ಊರಿಗೆ ಊರೇ ಖಾಲಿ: ಹಾವೇರಿಯ ಈ ಗ್ರಾಮಕ್ಕೆ ಅಂದು ಪ್ರವೇಶವೂ ನಿರ್ಬಂಧ!