ಬೆಂಗಳೂರು: ಹಣಕ್ಕಾಗಿ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡುವುದು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಇದು ವಿನಾಶಕಾರಿಯಾಗಲಿದೆ ಎಂದು ತಿಳಿಸಿರುವ ಹೈಕೋರ್ಟ್, ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
2012ರಲ್ಲಿ ಮಂಗಳೂರಿನಲ್ಲಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಆರೋಪಿ ಕೇರಳದ ಕಾಸರಗೋಡು ಜಿಲ್ಲೆ ವಲುಕ್ಕಾಡ್ ನಿವಾಸಿ ಎನ್. ಪಿ. ಮೊಹಮ್ಮದ್ ಶಾಹಿದ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ಜಿ. ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪ ಇಡೀ ಆಡಳಿತ ವ್ಯವಸ್ಥೆಯ ವಿರುದ್ಧ ಮಾಡಿದ್ದಾಗಿದೆ. ನಕಲಿ ಪದವಿ ಮತ್ತು ಡಿಪ್ಲೊಮಾ ಮಾರ್ಕ್ಸ್ ಕಾರ್ಡ್ಗಳನ್ನು ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ ಮಾರಾಟ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಮಾಡುವುದು ಅತ್ಯಂತ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ವಿರುದ್ಧ ಪೊಲೀಸ್ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದು, ಆರೋಪಿಯ ಕೃತ್ಯದಿಂದ ದೂರುದಾರರು ನೊಂದವರಲ್ಲ. ತನಿಖೆಗೆ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ನ್ಯಾಯಪೀಠ ತಳ್ಳಿಹಾಕಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ : ಅರ್ಜಿದಾರರು ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ಸರ್ಟಿಫಿಕೆಟ್‌ಗಳನ್ನು ನಕಲಿಯಾಗಿ ತಯಾರಿಸಿ, ಮಾರಾಟ ಮಾಡುತ್ತಿದ್ದ ಸಂಬಂಧ ಸಿಸಿಬಿ ಅಧಿಕಾರಿಗಳು ಅರ್ಜಿದಾರರ ಕಚೇರಿ ಮೇಲೆ ದಾಳಿ ನಡೆಸಿದ್ದರು.
ಇದನ್ನೂ ಓದಿ: ಬಜೆಟ್ನಲ್ಲಿ ಘೋಷಿಸಿದ್ದ ಅನುದಾನ ಬಿಡುಗಡೆಗೆ ಕೋರಿ ಹೈಕೋರ್ಟ್ಗೆ ವಿಶ್ವ ಗಾಣಿಗ ಸಮುದಾಯದ ಟ್ರಸ್ಟ್ ಅರ್ಜಿ
ಈ ಸಂದರ್ಭದಲ್ಲಿ ಆಗ್ರಾದ ಡಾ. ಬಿ.ಆರ್. ಅಂಬೇಡ್ಕರ್ ವಿವಿ, ಚತ್ತಿಸ್‌ಘಡ ವಿವಿ, ಬಿಸ್ಲಾಪುರ್ ಡಾ. ಸಿ.ವಿ. ರಾಮನ್ ವಿವಿ, ಕರ್ನಾಟಕದ ಎಸ್ಎಸ್ಎಲ್ಸಿ ಬೋರ್ಡ್ ಸೇರಿದಂತೆ ವಿವಿಧ ವಿಶ್ವವಿದ್ಯಾಲಯ ಮತ್ತು ಬೋರ್ಡ್ಗಳ ನಕಲಿ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಆರೋಪ ಬೆಳಕಿಗೆ ಬಂದಿತ್ತು.
ಅಲ್ಲದೆ, 30 ಸಾವಿರ ರೂ.ಗಳಿಂದ 95 ಸಾವಿರ ರೂಪಾಯಿಗಳ ವರೆಗೆ ಅಂಕಪಟ್ಟಿಗಳನ್ನು 30 ದಿನಗಳ ಒಳಗಾಗಿ ವಿತರಿಸಲಾಗುತ್ತಿತ್ತು. ಇದರಲ್ಲಿ ನಕಲಿ ಅಂಕಪಟ್ಟಿಗಳು, ನಕಲಿ ಮೈಗ್ರೇಷನ್ ಸರ್ಟಿಫಿಕೆಟ್‌ಗಳು, ಪದವಿ ಸರ್ಟಿಫಿಕೆಟ್‌ಗಳನ್ನು ನಕಲಿ ಮಾಡಿ ನೀಡಲಾಗುತ್ತಿತ್ತು ಎಂಬುದು ಗೊತ್ತಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಪೂರ್ವ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ರದ್ದು ಮಾಡುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಡೆಂಗ್ಯೂ ಹರಡಲು ಕಾರಣರಾಗುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೆ ಹೈಕೋರ್ಟ್ ಆದೇಶ